ಬೆಂಗಳೂರು: 12ನೇ ಆವೃತ್ತಿಯ ಬಿಗ್ ಬಾಸ್ ವಿಜೇತ ನಟ ಗಿಲ್ಲಿ ನಟರಾಜ್ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಕಾವೇರಿ ನಿವಾಸದಲ್ಲಿ ಭೇಟಿಯಾಗಿ ಅಭಿನಂದಿಸಿದರು. ಈ ವೇಳೆ ಅವರಿಗೆ ಶುಭ ಕೋರಿ ಮುಖ್ಯಮಂತ್ರಿಗಳು, ಮುಂದಿನ ಭವಿಷ್ಯಕ್ಕೆ ಉತ್ತಮವಾಗಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಸಚಿವ ಬೈರತಿ ಬಸವರಾಜ್ ಹಾಗೂ ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ ಉಪಸ್ಥಿತರಿದ್ದರು.
ಈ ಬಾರಿಯ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಗಿಲ್ಲಿ ನಟರಾಜ್ ವಿಜೇತರಾಗಿ ಹೊರಹೊಮ್ಮಿದರೆ, ನಟಿ ರಕ್ಷಿತಾ ರನ್ನರ್ ಅಪ್ ಸ್ಥಾನ ಪಡೆದರು. ಅಶ್ವಿನಿ ಗೌಡ ಅವರು ಎರಡನೇ ರನ್ನರ್ ಅಪ್ ಆಗಿ ಗುರುತಿಸಿಕೊಂಡಿದ್ದರು.
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದವರಾದ ಗಿಲ್ಲಿ, ತಮ್ಮ ಸಹಜ ನಡವಳಿಕೆ ಮತ್ತು ಮಾತಿನ ಮೋಡಿಯಿಂದ ರಾಜ್ಯದ ಜನತೆಯ ಮನಸ್ಸು ಗೆದ್ದಿದ್ದರು. ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗಿಲ್ಲಿ ಅರ್ಹವಾಗಿಯೇ ಬಿಗ್‌ಬಾಸ್ ಕಿರೀಟವನ್ನು ತಮ್ಮದಾಗಿಸಿಕೊಂಡಿದ್ದಾರೆ.
















