ಮುಸ್ಲಿಂ ಬಾಲಕಿಯರ ಪ್ರತ್ಯೇಕ ಶಾಲೆ ವಿಚಾರ ಚರ್ಚೆ ಆಗಿಲ್ಲ; ವಕ್ಫ್ ಬೋರ್ಡ್ ಅಧ್ಯಕ್ಷರ ಹೇಳಿಕೆ ವೈಯಕ್ತಿಕ: ಬೊಮ್ಮಾಯಿ ಸ್ಪಷ್ಟನೆ

ಬೆಂಗಳೂರು: ಮುಸ್ಲಿಂ ಬಾಲಕಿಯರಿಗಾಗಿಯೇ 10 ಹೊಸ ಕಾಲೇಜುಗಳನ್ನು ಸ್ಥಾಪಿಸುವ ರಾಜ್ಯದ ಆಡಳಿತಾರೂಢ ಬಿಜೆಪಿ ಸರ್ಕಾರದ ನಿರ್ಧಾರಕ್ಕೆ ಪ್ರತಿಯಾಗಿ ಕರ್ನಾಟಕದಲ್ಲಿ ವ್ಯಾಪಕ ಪ್ರತಿಭಟನೆ ನಡೆಸುವುದಾಗಿ ಹಿಂದೂ ಸಂಘಟನೆಗಳು ಎಚ್ಚರಿಕೆ ನೀಡಿದ್ದರಿಂದ ವಿವಾದ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಈ ವಿಚಾರ ತನಗೆ ತಿಳಿದಿಲ್ಲ ಎಂದಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರಿಗಾಗಿ 10 ಕಾಲೇಜುಗಳನ್ನು ತೆರೆಯಲು ಸರ್ಕಾರವು ಒಪ್ಪಿಗೆ ನೀಡಿದೆ ಎಂಬ ಕರ್ನಾಟಕ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನಾ ಶಾಫ್ತಿ ಸಾದಿ ಅವರ ಹೇಳಿಕೆಯನ್ನು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಡಿಸೆಂಬರ್ 1 ರಂದು ತಳ್ಳಿ ಹಾಕಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನನಗೆ ಗೊತ್ತಿಲ್ಲ. ನನ್ನ ಸರ್ಕಾರದಲ್ಲಿ ಚರ್ಚೆ ಆಗಿಲ್ಲ. ಇದು ನನ್ನ ಸರ್ಕಾರದ ನಿಲುವಲ್ಲ. ಏನಾದರೂ ಸಮಸ್ಯೆ ಇದ್ದರೆ, ವಕ್ಫ್ ಬೋರ್ಡ್ ಅಧ್ಯಕ್ಷರು ಬಂದು ನನ್ನೊಂದಿಗೆ ಮಾತನಾಡಲಿ” ಎಂದಿದ್ದಾರೆ.

ನವೆಂಬರ್ 30 ರಂದು ಕರ್ನಾಟಕ ವಕ್ಫ್ ಬೋರ್ಡ್ ಅಧ್ಯಕ್ಷ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿ ಕಾಲೇಜಿಗೆ ₹ 2.5 ಕೋಟಿ ವೆಚ್ಚದಲ್ಲಿ 10 ಹೆಣ್ಣುಮಕ್ಕಳ ಕಾಲೇಜುಗಳನ್ನು ಪ್ರಾರಂಭಿಸಲು ನಾವು ನಿರ್ಧರಿಸಿದ್ದೇವೆ. ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಹೇಳಿದ್ದರು. ದಕ್ಷಿಣ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು, ರಾಯಚೂರು, ಕೊಪ್ಪಳ, ಕಲಬುರಗಿ ಮತ್ತು ರಾಜ್ಯದ ಇತರ ಜಿಲ್ಲೆಗಳಲ್ಲಿ ಹೊಸ ಕಾಲೇಜುಗಳನ್ನು ತೆರೆಯಲಾಗುವುದು. ಮಂಡಳಿಯು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16 ಎಕರೆ ಭೂಮಿಯನ್ನು ಗುರುತಿಸಿದೆ ಎಂದು ವಕ್ಫ್ ಮಂಡಳಿ ಅಧ್ಯಕ್ಷರು ತಿಳಿಸಿದ್ದರು.

ಆದರೆ ಈಗ ಮುಖ್ಯಮಂತ್ರಿ ಬೊಮ್ಮಾಯಿ ಬಹುಶಃ ಇದು ವಕ್ಫ್ ಬೋರ್ಡ್ ಅಧ್ಯಕ್ಷರ ವೈಯಕ್ತಿಕ ಹೇಳಿಕೆಯಾಗಿರಬಹುದು ಎಂದಿದ್ದಾರೆ.