ಜನಪರ ಆಡಳಿತದ ಭರವಸೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ; ವಿಧವಾ ವೇತನ, ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತ ಏರಿಕೆ

ಬೆಂಗಳೂರು: ಮುಖ್ಯಮಂತ್ರಿ ಆದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ರೈತರಿಗೆ, ಹಿರಿಯ ನಾಗರಿಕರಿಗೆ ಹಾಗೂ‌ ವಿಧವೆಯರಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ಥಿಕ ವೆಚ್ಚ ಕಡಿಮೆ ಮಾಡಲು ಎಲ್ಲಾ ಇಲಾಖೆಗಳ ವೆಚ್ಚವನ್ನು ಕನಿಷ್ಠ 5 ರಷ್ಟಾದರೂ ಕಡಿಮೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ.

ಅರ್ಜಿಗಳ ವಿಲೇವಾರಿಗೆ ತಡವಾಗುವುದನ್ನು ತಡೆಯಲು ವಿಶೇಷ ಯೋಜನೆ ಜಾರಿ ಮಾಡುತ್ತೇವೆ. 15 ದಿನಗಳಲ್ಲಿ ಹೊಸ ಯೋಜನೆ ಆರಂಭವಾಗಲಿದೆ. ಹೊಸ ದಿಸ್ಸೂಚಿಯಿಂದ ಆಡಳಿತದಲ್ಲಿ ದಕ್ಷತೆ ತರುವ, ಅಭಿವೃದ್ಧಿ ಕಾಮಗಾರಿಗೆ ವೇಗ ನೀಡುವ ಕಾರ್ಯ ಮಾಡುತ್ತೇವೆ. ಆಡಳಿತ ದೃಷ್ಠಿಯಿಂದಲೂ ಆರ್ಥಿಕ ಇಲಾಖೆಯೊಂದಿಗೆ ಮಾತುಕತೆ ನಡೆಸುತ್ತೇನೆ. ಈಗ ನಮಗೆ ಕೊರೊನಾ ಮತ್ತು ನೆರೆ ಸವಾಲು ಎದುರಿದಿದೆ. ಆರೋಗ್ಯ ಸಚಿವರೊಂದಿಗೆ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸುತ್ತೇವೆ ಎಂದರು.

ಬೊಮ್ಮಾಯಿ ಮೊದಲ ಸಚಿವ ಸಂಪುಟ ಸಭೆಯ ನಿರ್ಣಯಗಳು:

ರೈತರ ಮಕ್ಕಳಿಗಾಗಿ ಉನ್ನತ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡಲು ಹೊಸ ಶಿಷ್ಯ ವೇತನ ಜಾರಿ ಮಾಡಲಾಗಿದ್ದು, ಇದಕ್ಕೆ 1 ಸಾವಿರ ಕೋಟಿ ರೂಪಾಯಿ ವೆಚ್ಚ ಆಗಲಿದೆ.

ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 1000 ರೂ. ದಿಂದ 1200 ರೂ.ಗೆ ಹೆಚ್ಚಳ ಮಾಡಲಾಗಿದೆ. ಇದರಿಂದ 862 ಕೋಟಿ ರೂಪಾಯಿ ಹೆಚ್ಚುವರಿ ಆಗಲಿದೆ. 35.98 ಲಕ್ಷ ಫಲಾನುಭವಿಗಳಿವೆ ಅನುಕೂಲ ಆಗಲಿದೆ.

ವಿಧವಾ ವೇತನ 600 ರೂ.ಯಿಂದ 800 ರೂ.ಗೆ ಏರಿಕೆ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ 400 ಕೋಟಿ ರೂಪಾಯಿ ಹೆಚ್ಚುವರಿ ಹೊರೆ.

ಶೇ.45-75 ಅಂಗವಿಕಲರ ವೇತನ ಯೋಜನೆಯಡಿಯಲ್ಲಿ 600 ರೂ. ಬದಲು 800 ರೂ.ಗೆ ಏರಿಕೆ ಮಾಡಲಾಗಿದೆ.

ನಮ್ಮ ಸರ್ಕಾರ ರೈತರು ಮತ್ತು ಬಡವರ ಬಗ್ಗೆ ಕೆಲಸ ಮಾಡುತ್ತೇವೆ ಎಂದಿದ್ದೇವೆ. ಅದರ ಮೊದಲ ಹೆಜ್ಜೆ ಇದಾಗಿದೆ. ಸಾಮಾಜಿಕ ಭದ್ರತೆ ಕೊಡುವ ನಿಟ್ಟಿನಲ್ಲಿ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದರು.