ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರವಾಸ ನಡೆಸಿ, ವಿವಿಧೆಡೆ ನೆರೆ ಹಾಗೂ ಮಳೆಯಿಂದಾದ ಹಾನಿ ಪರಿಶೀಲಿಸಿ, ಅಧಿಕಾರಿಗಳ ಜತೆಗೆ ಸಭೆ ನಡೆಸಿ ಪರಿಹಾರ ಕಾರ್ಯಗಳ ಕುರಿತು ಅಗತ್ಯ ಸಲಹೆ-ಸೂಚನೆಗಳನ್ನು ನೀಡಿ, ಸಂತ್ರಸ್ತರಿಗೆ ಪರಿಹಾರ ಚೆಕ್ ವಿತರಿಸಿದರು. ಮಡಿಕೇರಿಯಲ್ಲಿ ಮಳೆಹಾನಿಗೊಳಗಾದ ಪ್ರದೇಶಗಳ ನಿರೀಕ್ಷಣೆ ನಡೆಸಿ ಅಲ್ಲಿಂದ ಸುಳ್ಯಕ್ಕೆ ತೆರಳುವ ಸಂದರ್ಭದಲ್ಲಿ ಕೊಯನಾಡು ಮತ್ತು ದ.ಕ.ಜಿಲ್ಲೆಯ ಸಂಪಾಜೆಗೆ ಭೇಟಿ ನೀಡಿ ಮಳೆ ಹಾಗೂ ಭೂಕಂಪದಿಂದ ಹಾನಿಗೊಂಡು ಬಿರುಕು ಬಿಟ್ಟಮನೆಗಳ ವೀಕ್ಷಣೆ ನಡೆಸಿದರು. ಕೊಯನಾಡು ಗಣಪತಿ ದೇವಸ್ಥಾನದ ಸಭಾಭವನದಲ್ಲಿ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿ ನೆಲೆಸಿರುವವರಿಗೆ ಧೈರ್ಯ ತುಂಬಿದರು. ನಂತರ ಸುಳ್ಯ ನಿರೀಕ್ಷಣಾ ಮಂದಿರಕ್ಕೆ ತೆರಳಿ ತಾಲೂಕಿನಲ್ಲಿ ಉಂಟಾಗಿರುವ ಮಳೆ ಹಾನಿ ಮತ್ತು ಭೂಕಂಪನದ ಬಗ್ಗೆ ಮಾಹಿತಿ ಪಡೆದರು.
ಬಂಟ್ವಾಳ ತಾಲೂಕಿನ ನೇತ್ರಾವತಿ ಮತ್ತು ಕುಮಾರಧಾರ ನದಿ ಸಂಗಮ ಕ್ಷೇತ್ರಕ್ಕೆ ಭೇಟಿ ಪ್ರವಾಹ ಪರಿಸ್ಥಿತಿಯನ್ನು ನಿರೀಕ್ಷಿಸಿದ ಬಳಿಕ ಪಂಜಿಕಲ್ಲು ಗ್ರಾಮದ ಮುಕುಡ ಎಂಬಲ್ಲಿ ಕಳೆದ ವಾರ ಗುಡ್ಡ ಕುಸಿದು ಮಣ್ಣಿನಡಿ ಸಿಲುಕಿ ಮೃತಪಟ್ಟಕೇರಳ ಮೂಲದ ಮೂವರು ಕಾರ್ಮಿಕರ ಕುಟುಂಬದವರಿಗೆ ತಲಾ 5 ಲಕ್ಷ ರೂ ಪರಿಹಾರದ ಚೆಕ್ ವಿತರಿಸಿದರು.
ತದನಂತರ ಉಳ್ಳಾಲದ ಕಡಲಕಿನಾರೆ ಬಟ್ಟಪಾಡಿಗೆ ಆಗಮಿಸಿದ ಬೊಮ್ಮಾಯಿ, ಮಳೆಯ ನಡುವೆಯೂ ಕಡಲ್ಕೊರೆತದಿಂದಾದ ಹಾನಿಯನ್ನು ಅವಲೋಕಿಸಿದರು. ಅಲ್ಲಿನ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕ ಯು.ಟಿ.ಖಾದರ್ ರಿಂದ ಪರಿಸ್ಥಿತಿಯ ವಿವರಣೆ ಪಡೆದರು.
ಸಚಿವರಾದ ಆರ್.ಅಶೋಕ್. ಅಂಗಾರ, ಸುನಿಲ್ ಕುಮಾರ್, ಸಿ.ಸಿ. ಪಾಟೀಲ್, ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳಿನ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಬುಧವಾರ ಉಡುಪಿ, ಉ.ಕನ್ನಡ ಭೇಟಿ: ಮುಖ್ಯಮಂತ್ರಿ ಬೊಮ್ಮಾಯಿ ಬುಧವಾರ ಉಡುಪಿ ಮತ್ತು ಉತ್ತರ ಕನ್ನಡದಲ್ಲಿ ನೆರೆ ಹಾನಿ ಪರಿಶೀಲನೆ ನಡೆಸಲಿದ್ದಾರೆ. ಇದಕ್ಕೂ ಮೊದಲು ಉಡುಪಿ ರಜತಾದ್ರಿಯಲ್ಲಿ ದ.ಕ, ಉಡುಪಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಚಿತ್ರ ಕೃಪೆ: ಮುಖ್ಯಮಂತ್ರಿಗಳ ಟ್ವಿಟರ್ ಖಾತೆ












