ಹೊಸದಿಲ್ಲಿ: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸೋಲು ಅನುಭವಿಸಿದ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶನಿವಾರ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ರಾಜ್ಯಪಾಲರು ಅಂಗೀಕರಿಸಿದ್ದಾರೆ.
“ನಾನು ನನ್ನ ರಾಜೀನಾಮೆಯನ್ನು ನೀಡಿದ್ದೇನೆ ಮತ್ತು ಅದನ್ನು ಅಂಗೀಕರಿಸಲಾಗಿದೆ” ಎಂದು ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನಗಳನ್ನು ಗೆದ್ದಿದ್ದು, ಬಿಜೆಪಿ 65 ಮತ್ತು ಜೆಡಿಎಸ್ 19 ಸ್ಥಾನಗಳನ್ನು ಗಳಿಸಿದೆ.
ಫಲಿತಾಂಶಗಳನ್ನು ಒಪ್ಪಿಕೊಂಡಿರುವ ಬೊಮ್ಮಾಯಿ, ಬಹುಮತ ಪಡೆಯಲು ಸಾಧ್ಯವಾಗದ ಕೊರತೆಗಳನ್ನು ವಿಶ್ಲೇಷಿಸುವುದಾಗಿ ಹೇಳಿದ್ದಾರೆ.
ಪ್ರಧಾನಿ ಮತ್ತು ಬಿಜೆಪಿ ಕಾರ್ಯಕರ್ತರು ಸಾಕಷ್ಟು ಪ್ರಯತ್ನಗಳನ್ನು ಮಾಡಿದರೂ, ನಮಗೆ ಬಹುಮತ ಪಡೆಯಲು ಸಾಧ್ಯವಾಗಲಿಲ್ಲ. ಲೋಕಸಭೆ ಚುನಾವಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮತ್ತೆ ಪುಟಿಯಲು ಈ ಫಲಿತಾಂಶಗಳನ್ನು ವಿಶ್ಲೇಶಣೆ ಮಾದುವುದಾಗಿ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಏತನ್ಮಧ್ಯೆ, ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್ಪಿ) ಮೊದಲ ಸಭೆ ಭಾನುವಾರ ಸಂಜೆ 5.30ಕ್ಕೆ ನಡೆಯಲಿದೆ ಎಂದು ಕರ್ನಾಟಕ ಎಐಸಿಸಿ ಉಸ್ತುವಾರಿ ರಣದೀಪ್ ಸುರ್ಜೆವಾಲಾ ತಿಳಿಸಿದ್ದಾರೆ. ಸಭೆಯಲ್ಲಿ ನೂತನ ಮುಖ್ಯಮಂತ್ರಿಯ ಹೆಸರನ್ನು ನಿರ್ಧರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.