ಕಾಡುಹೊಳೆ ಮಧುವನದಲ್ಲಿ ಕಲಾ ಕಲರವ ಸಮಾರೋಪ ಸಮಾರಂಭ

ಕಾರ್ಕಳ: ಕಲೆ ಬದುಕಿನಲ್ಲಿ ಸೌಂದರ್ಯ ಪ್ರಜ್ಞೆಯನ್ನು ಹೆಚ್ಚಿಸುತ್ತದೆ. ಚಿತ್ರಗಳು-ಬಣ್ಣಗಳು ಮನಸ್ಸನ್ನು ಪ್ರಶಾಂತಗೊಳಿಸುವುದು ಮಾತ್ರವಲ್ಲದೆ, ನಮ್ಮೊಳಗಿನ ಅಂತಃಶಕ್ತಿಯನ್ನು ಜಾಗೃತಗೊಳಿಸಿ ಕಷ್ಟಗಳನ್ನು ಎದುರಿಸುವ ಧೈರ್ಯವನ್ನು ನೀಡುತ್ತದೆ ಎಂದು ಮುನಿಯಾಲು ಕಾಡುಹೊಳೆ ಜನಪ್ರಿಯ ರೈಸ್ ಕಾರ್ಪರೇಷನ್ ಪಾಲುದಾರ ಕೆ.ಮಂಜುನಾಥ್ ಹೇಳಿದರು.

ಜನಪ್ರಿಯ ರೈಸ್ ಕಾರ್ಪರೇಷನ್ ಪ್ರಾಯೋಜಕತ್ವದಲ್ಲಿ ಕಾಡುಹೊಳೆ ಮಧುವನದಲ್ಲಿ ನಡೆದ 25 ದಿನಗಳ, ಸ್ಥಳೀಯ ಬಡ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲೆ ಮತ್ತು ಬೌದ್ಧಿಕ ಸಾಮರ್ಥ್ಯ ವೃದ್ಧಿ ತರಗತಿಯ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಇನ್ನೋರ್ವ ಪಾಲುದಾರರಾದ ಎಚ್. ಮಂಜುನಾಥ ಮಾತನಾಡಿ, ಕಲೆಯ ಸೊಗಡು ಇಡೀ ಪ್ರಪಂಚದಾಂತ್ಯ ಹರಡಿದೆ. ಬೆಣಚು ಕಲ್ಲಿನಿಂದ ಹಿಡಿದು ರಜತ ಶಿಲ್ಪದವರೆಗೂ ಒಂದಿಂಚೂ ಬಿಡದೆ ಹರಡಿದೆ ಎಂದರು.

ಪೋಷಕರು ಮತ್ತು ವಿದ್ಯಾರ್ಥಿಗಳ ಪರವಾಗಿ ಮಾತನಾಡಿದ ಕಾವ್ಯಶ್ರೀ ಹಳ್ಳಿನಾಡಿನ ಬಡ ಪ್ರತಿಭೆಗಳಿಗೆ ಈ ಅಪೂರ್ವ ಅವಕಾಶವನ್ನು ಕಲ್ಪಿಸಿಕೊಟ್ಟ ಜನಪ್ರಿಯ ರೈಸ್ ಕಾರ್ಪರೇಷನ್ ಹಾಗೂ ಗುರುಗಳು ನಾಡಿನ ಎಲ್ಲಾ ಹಳ್ಳಿಗಳಿಗೂ ಮಾದರಿಯಾಗಲಿ ಎಂದರು.

ಇದೇ ಸಂದರ್ಭದಲ್ಲಿ ತರಗತಿಯನ್ನು ನಡೆಸಿಕೊಟ್ಟ ಹಿರಿಯ ಕಲಾವಿದ ಚಂದ್ರನಾಥ ಬಜಗೋಳಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ರತ್ನಾ ಮಂಜುನಾಥ್, ಯಾದವ್ ಶೆಟ್ಟಿಗಾರ್, ವಿನಯ್ ಕುಮಾರ್, ಸತೀಶ್, ವಿಜಯಶ್ರೀ, ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳು ತಾವು ರಚಿಸಿದ ಕಲಾಕೃತಿಗಳನ್ನು ಅತಿಥಿಗಳಿಗೆ ನೀಡಿದರು. ಯೋಗೇಂದ್ರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.