ಹೆಜಮಾಡಿ ಕಡಲ ಕಿನಾರೆಯಲ್ಲಿ ಸ್ವಚ್ಛತಾ ಶ್ರಮದಾನ

ಪಡುಬಿದ್ರಿ: ಜಿಲ್ಲೆಯಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್ ವತಿಯಂದ ಹಮ್ಮಿಕೊಂಡ ಕಾರ್ಯಕ್ರಮಗಳು ಶ್ಲಾಘನೀಯ, ಗ್ರಾಪ ಪಂಚಾಯತ್ ಗಳಲ್ಲಿ ಎಸ್.ಎಲ್.ಆರ್.ಎಮ್ ಘಟಕಗಳನ್ನು ಪ್ರಾರಂಭಿಸಿ ಗ್ರಾಮಗಳ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ, ಹಾಗೂ ಹೆಜಮಾಡಿ ಗ್ರಾಮ ಪಂಚಾಯತ್ ನ ಘಟಕದ ಸ್ವಚ್ಛತಾ ಸಿಬ್ಬಂದಿಗಳು ಅತ್ಯುತ್ತಮವಾಗಿ ಸ್ವಚ್ಛತಾ ಕಾರ್ಯ ನಡೆಸುತ್ತಾ ಬರುತ್ತಿದ್ದಾರೆ ಎಂದು ಕಾಪು ಕ್ಷೇತ್ರದ ಶಾಸಕ ಲಾಲಾಜಿ ಆರ್ ಮೆಂಡನ್  ಹೇಳಿದ್ದಾರೆ.

ಸ್ವಚ್ಚ ಭಾರತ್ ಮಿಷನ್(ಗ್ರಾ) ಜಿಲ್ಲಾ ಪಂಚಾಯತ್ ಉಡುಪಿ, ಮತ್ತು ಹೆಜಮಾಡಿ ಗ್ರಾಮ ಪಂಚಾಯತ್ ಇವರ ಸಹಯೋಗದಲ್ಲಿ ಜು.29 ರಂದು ನಡೆದ ಸ್ವಚ್ಚತಾ ಶ್ರಮದಾನ – ಬೀಚ್ ಕ್ಲಿನೀಂಗ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಜಿಲ್ಲಾ ಪಂಚಾಯತ್ ಉಡುಪಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಪ್ರೀತಿ ಗೆಹ್ಲೋತ್ ಮಾತನಾಡಿ, ಹೆಜಮಾಡಿ ಗ್ರಾಮದ ರೀತಿಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಲ್ಲಿ ಗ್ರಾಮಗಳ ಸ್ವಚ್ಛತೆ ಕಾಪಾಡಲು ಸಹಾಯಕವಾಗುವುದು ಹಾಗೂ ಸ್ವಚ್ಛ ಭಾರತದ ಕನಸು ನನಸಾಗಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಹೆಜಮಾಡಿ ರಸ್ತೆ ಸುಂಕ ವಸೂಲಾತಿ ಕೇಂದ್ರದ ಸಮೀಪ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ನೈರ್ಮಲ್ಯ ಸಾರುವ ಫಲಕಗಳನ್ನು ಅನಾವರಣಗೊಳಿಸಲಾಯಿತು.

ಸುಮಾರು 80 ಮಂದಿ ಸ್ಥಳೀಯ ಯುವಕ ಯುವತಿಯರು, ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರು, ಹೆಜಮಾಡಿ SLRM ಕೇಂದ್ರದ ಕಾರ್ಯಕರ್ತರು, ಸ್ತ್ರೀ ಶಕ್ತಿ ಸಂಘದ ಸದಸ್ಯರು ಅಮವಾಸ್ಯೆ ಕರಿಯ ಕಡಲ ಕಿನಾರೆಯಲ್ಲಿ ಸ್ವಚ್ಚತಾ ಶ್ರಮದಾನದಲ್ಲಿ ಭಾಗವಹಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ನ ಉಪಾಧ್ಯಕ್ಷರಾದ  ಶೀಲಾ ಕೆ ಶೆಟ್ಟಿ, ಹಾಗೂ ಹೆಜಮಾಡಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿಯಾದ ವೀಣಾ ಬಲ್ಲಾಳ್,  ತಾಲೂಕು ಪಂಚಾಯತ್ ಸದಸ್ಯರಾದ   ನೀತಾ ಗುರುರಾಜ್ , ಹೆಜಮಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಹಾಗೂ ಗಾಂಧಿ ನಗರ ಯುವಕ ಯುವತಿ ವೃಂದ, ಕರಾವಳಿ ಯುವಕ ವೃಂದ, ಸ್ತ್ರೀ ಶಕ್ತಿ ಸಂಘದ ಸದಸ್ಯರು, ಕರಾವಳಿ ಯುವಕ ವೃಂದದ ಸದಸ್ಯರು, ನೆಹರು ಯುವಕ ಯುವತಿ ವೃಂದ ಸದಸ್ಯರು ಶ್ರಮದಾನದಲ್ಲಿ ಉಪಸ್ಥಿತರಿದ್ದರು.