ಉಡುಪಿ: ಖಾಲಿ ಜಾಗದಲ್ಲಿರುವ ಗಿಡಗಂಟಿಗಳನ್ನು ಸ್ವಚ್ಛಗೊಳಿಸಿ, ಇಲ್ಲದಿದ್ದರೆ ದಂಡ ಕಟ್ಟಲು ರೆಡಿಯಾಗಿ.!

ಉಡುಪಿ: ಖಾಲಿ ಜಾಗಗಳಲ್ಲಿ ಬೆಳೆದಿರುವ ಗಿಡಗಂಟಿಗಳನ್ನು ತೆಗೆಯಲು ಸಂಬಂಧಪಟ್ಟ ಜಾಗದ ಮಾಲೀಕರಿಗೆ ಸೂಚಿಸಬೇಕು. ನಿಗದಿತ ಅವಧಿಯಲ್ಲಿ ಅವರು ತೆಗೆಯದಿದ್ದಲ್ಲಿ ದಂಡ ವಸೂಲು ಮಾಡುವಂತೆ ಸಂಸದೆ ಶೋಭಾ ಕರಂದ್ಲಾಜೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಬುಧವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ, ಉಡುಪಿ ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿನ ಸಮಸ್ಯೆಗಳ ಕುರಿತ ಸಂಬಂಧದಲಪಟ್ಟ ನಗರಸಭಾ ಸದಸ್ಯರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಉಡುಪಿ ನಗರಸಭಾ ವ್ಯಾಪ್ತಿಯ ವಿವಿಧ ವಾರ್ಡ್ ಗಳಲ್ಲಿನ ಸಮಸ್ಯೆಗಳ ಕುರಿತು ಸಂಬಂಧಪಟ್ಟ ವಾರ್ಡ್ ನ ಸದಸ್ಯರುಗಳು ನೀಡುವ ದೂರುಗಳನ್ನು ಕೂಡಲೇ ಬಗೆಹರಿಸಬೇಕು. ಕುಡಿಯುವ ನೀರು, ವಿದ್ಯುತ್ ದೀಪ ಸಮಸ್ಯೆ ಮತ್ತು ನೈರ್ಮಲ್ಯದ ಕುರಿತ ಸಮಸ್ಯೆಗಳನ್ನು ಆದ್ಯತೆಯಲ್ಲಿ ಇತ್ಯರ್ಥಪಡಿಸಬೇಕು ಎಂದು ತಿಳಿಸಿದರು.

ಮಣಿಪಾಲದಲ್ಲಿ ರಸ್ತೆ ಅಗಲೀಕರಣದಿಂದ ಸಂತ್ರಸ್ತರಾಗುವ ಗೂಡಂಗಡಿಗಳ ಮಾಲೀಕರಿಗೆ ವ್ಯಾಪಾರಕ್ಕಾಗಿ ಪರ್ಯಾಯ ಜಾಗ ಗುರುತಿಸಿ ನೀಡಬೇಕು. ರಸ್ತೆ ಬದಿಯಲ್ಲಿ ಅನುಮತಿ ಇಲ್ಲದೇ ವ್ಯಾಪಾರ ಮಾಡುವವರು ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಡಿಸಿ ಜಿ. ಜಗದೀಶ್, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ಅರುಣ ಪ್ರಭಾ, ಪೌರಾಯುಕ್ತ ಆನಂದ್ ಕಲ್ಲೋಳಿಕರ್ ಹಾಗೂ ನಗರಸಭೆಯ ಅಧಿಕಾರಿಗಳು ಉಪಸ್ಥಿತರಿದ್ದರು.