ಉಡುಪಿ: ಸ್ವಚ್ಛ ಪರಿಸರದಿಂದ ಆರೋಗ್ಯವಂತ ಸಮಾಜವನ್ನು ನಿರ್ಮಾಣ ಮಾಡಬಹುದು ಎಂದು ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ಡಾ. ನರಸಿಂಹ ನಾಯಕ್ ಹೇಳಿದರು.
ಪರ್ಕಳ ಅಂಗನವಾಡಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಹಿರೇಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಪರ್ಕಳ ಅಂಗನವಾಡಿಯಲ್ಲಿ ಸೋಮವಾರ ಆಯೋಜಿಸಿದ ಆರೋಗ್ಯವಂತ ಶಿಶು ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಚ್ಛತೆಗೆ ಆದ್ಯತೆ ನೀಡದಿರುವುದು ಹಾಗೂ ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಕೊಳಚೆ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸೊಳ್ಳೆಗಳ ಉತ್ಪತ್ತಿಯಾಗುತ್ತಿದೆ. ಇಂತಹ ಅಪಾಯಕಾರಿ ಕಾಯಿಲೆಗೆ ಹಸುಗೂಸುಗಳು ಬಹಳ ಬೇಗ ತುತ್ತಾಗುತ್ತಾರೆ. ಹಾಗಾಗಿ ಈ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳು ಮತ್ತು ನಗರಾಡಳಿತ ಆರೋಗ್ಯ ಇಲಾಖೆಯ ಜತೆಗೆ ಕೈಜೋಡಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ ಮಾತನಾಡಿ, ಪೋಷಕರಿಗೆ
ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ವೈದ್ಯರ ಜತೆಗೆ ಮಾಹಿತಿ ಹಂಚಿಕೊಳ್ಳಲು ಇಂತಹ ಕಾರ್ಯಕ್ರಮಗಳು ಬಹಳ ಸಹಕಾರಿಯಾಗಿವೆ ಎಂದರು.
ಈ ಸಂದರ್ಭದಲ್ಲಿ ಆರೋಗ್ಯವಂತ ಶಿಶುಗಳಿಗೆ ಬಹುಮಾನ ವಿತರಿಸಲಾಯಿತು. ನಗರಸಭೆಯ ಷಣ್ಮುಖ ಬಹುಮಾನ ವಿತರಿಸಿದರು. ಕಿರಿಯ ಆರೋಗ್ಯ ಸಹಾಯಕರಾದ ಸುಮಂಗಲ, ಹರಿಣಾಕ್ಷಿ ಮತ್ತು ರವಿ ಕಾರ್ಯಕ್ರಮ ಸಂಯೋಜಿಸಿದರು.