ಬೆಂಗಳೂರು: ಧರ್ಮಸ್ಥಳದಲ್ಲಿ ಎರಡು ಗುಂಪುಗಳ ನಡುವೆ ನಡೆದ ಗಲಾಟೆ ಕುರಿತು ತನಿಖೆ ನಡೆಸಿ ವರದಿ ಕೊಡಲು ಸೂಚಿಸಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಧರ್ಮಸ್ಥಳ ವಿಚಾರದಲ್ಲಿ ನಿನ್ನೆ ದಿನ ಎರಡು ಗುಂಪುಗಳ ನಡುವೆ ಘರ್ಷಣೆಯಾಗಿದೆ, ಅದು ಯಾಕಾಗಿದೆ ಯಾರು ಕಾರಣಕರ್ತರು ಅವರ ಉದ್ದೇಶ ಏನಿದೆ..? ಅನ್ನೋದನ್ನ ತನಿಖೆ ಮಾಡಿ ವರದಿ ಕೊಡಲು ಹೇಳಿದ್ದೇನೆ. ಇದು ಒಂದು ರೀತಿಯಲ್ಲಿ ಸಂಘರ್ಷ ಆಗ್ತಾ ಇದೆ ಅಂತ ಕಾಣಿಸ್ತಾ ಇದೆ, ಯಾಕೆ ಆಗ್ತಾ ಇದೆ ಗೊತ್ತಿಲ್ಲ. ಅಲ್ಲಿನ ಜನ ಸಮುದಾಯ ಎಸ್ಐಟಿ ಮಾಡಬೇಕು ಅಂತ ಒತ್ತಾಯ ಮಾಡಿದ್ರು ನಾವು ಅದನ್ನ ಬಹಳ ಎಚ್ಚರಿಕೆಯಿಂದ ಪರಿಶೀಲನೆ ಮಾಡಿ ಎಸ್ಐಟಿ ಮಾಡಿದ್ದೇವೆ. ಯಾವ ವ್ಯಕ್ತಿ ಕೊಲೆಯಾಗಿದೆ ಸುಟ್ಟಿದ್ದೀವಿ ಅಂತ ಹೇಳಿಕೊಂಡಿದ್ದ ಆತ ನ್ಯಾಯಾಲಯದ ಮುಂದೆ 164 ಹೇಳಿಕೆ ನೀಡಿದ್ದಾನೆ.
ನಾವು ಕೂಡ ಸಾರ್ವಜನಿಕವಾಗಿ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಎಸ್ಐಟಿ ಮಾಡಿದ್ದೇವೆ. 13 ಸ್ಥಳಗಳಲ್ಲಿ ಹೆಣಗಳನ್ನು ಹೂತಿದ್ದಾಗಿ ಹೇಳಿದ್ದ ಅದರ ಪ್ರಕಾರ ಎಸ್ಐಟಿ 13 ಸ್ಥಳಗಳನ್ನು ತೆಗೆದಿದ್ದಾರೆ. ಆರನೇ ಸ್ಥಳದಲ್ಲಿ ಒಂದು ಗಂಡಸಿನ ಅಸ್ತಿ ಪಂಜರ ಸಿಕ್ಕಿದೆ ಅದನ್ನ ನೀವೆಲ್ಲ ರಿಪೋರ್ಟ್ ಕೂಡ ಮಾಡಿದ್ದೀರಾ. 13ನೇ ಸ್ಥಳಕ್ಕೆ ಹೋದಾಗ್ಲು ಏನು ಸಿಕ್ಕಿಲ್ಲ ಅದನ್ನು ಹೊರತುಪಡಿಸಿ ಗುಡ್ಡದಲ್ಲಿ ಮೂಳೆಗಳು ಸಿಕ್ಕಿರೋದನ್ನ ಸೀಲ್ ಮಾಡಿದ್ದಾರೆ. ಅದನ್ನ ಎಫ್ಎಸ್ಎಲ್ ಗೆ ಕಳಿಸಿ ಕೊಡುವ ಕೆಲಸ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಎರಡು ಗುಂಪುಗಳಾಗಿ ಘರ್ಷಣೆಗಳು ನಡೆದಿವೆ. ಕೇಸ್, ಕೌಂಟರ್ ಕೇಸ್ ಕೊಟ್ಟಿದ್ದಾರೆ. ಎಲ್ಲವನ್ನು ರಿಜಿಸ್ಟರ್ ಮಾಡಿ ಅಂತ ಹೇಳಿದ್ದೇವೆ. ಅದನ್ನ ರಿಜಿಸ್ಟರ್ ಮಾಡಿದ್ದಾರೆ. ಅದರ ಮೇಲೆ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅನ್ನೋದನ್ನ ಎಸ್ಐಟಿ ಮತ್ತು ಸ್ಥಳೀಯ ಪೊಲೀಸರು ಮಾಡುತ್ತಾರೆ ಎಂದು ತಿಳಿಸಿದರು.
ನಾವು ಎಸ್ಐಟಿ ಅವರಿಗೆ ಜವಾಬ್ದಾರಿ ಕೊಟ್ಟಿದ್ದೇವೆ ಎಸ್ಐಟಿ ಸರಿಯಾಗಿ ಕೆಲಸ ಮಾಡುತ್ತಿದೆ. ತನಿಖೆಯ ಬಗ್ಗೆ ಯಾರ್ಯಾರು ಏನು ಹೇಳಿಕೆ ಕೊಡುತ್ತಾರೆ ಅದು ಮುಖ್ಯ ಅಲ್ಲ, ನಮಗೆ ಎಸ್ಐಟಿಯವರು ತನಿಖೆಯನ್ನು ತಾಂತ್ರಿಕವಾಗಿ ಆಧುನಿಕವಾಗಿ ಸತ್ಯ ಹೊರಗೆ ಬರುವ ರೀತಿಯಲ್ಲಿ ಮಾಡಬೇಕು.
ಎಸ್ಐಟಿ ಅವರು ಸರಿಯಾಗಿ ಮಾಡ್ಲಿಲ್ಲ ಅಂತ ಹೇಳುತ್ತಾರೆ. ನಾವೇ ತನಿಖೆ ಹೇಗಾಗಬೇಕು ಅಂತ ಹೇಳೋಕೆ ಶುರು ಮಾಡಿದ್ರೆ ಹೇಗೆ ? ಅವರು ಹೇಳಿದ ಹಾಗೆ ತನಿಖೆ ಮಾಡೋಕಾಗುತ್ತಾ? ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಸಮರ್ಥರಿದ್ದಾರೆ ಅವರು ನೋಡಿಕೊಳ್ಳುತ್ತಾರೆ ಎಂದರು.
ಮತ್ತಷ್ಟು ಉತ್ಖನನ ನಡೆಯುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅದನ್ನ ಎಸ್ಐಟಿ ತೀರ್ಮಾನ ಮಾಡುತ್ತಾರೆ. ಅದಕ್ಕೆ ನಾವು ಮಧ್ಯಪ್ರವೇಶ ಮಾಡಲ್ಲ ಅವರು ಹೇಳೋದ್ರಲ್ಲಿ ಸತ್ಯ ಇದೆ ನೋಡಬೇಕು ಅಂದ್ರೆ ನೋಡ್ತಾರೆ ಇದು ಅನುಮಾನಾಸ್ಪದವಾಗಿದ್ದರೆ ಅವರನ್ನೇ ಕೇಳ್ತಾರೆ. ಏನಪ್ಪಾ ಈ ರೀತಿ ಹೇಳ್ತಿದ್ಯಲ್ಲ ಸರಿಯಾಗಿ ಹೇಳು ಅಂತ ಈ ವಿಚಾರದಲ್ಲಿ ಸರ್ಕಾರ ಯಾವುದೇ ನಿರ್ದೇಶನವನ್ನು ಕೊಡುವುದಿಲ್ಲ ಎಂದು ತಿಳಿಸಿದರು.












