ಉಡುಪಿ : ಇಲ್ಲಿನ ಮಲ್ಪೆ ಮೀನುಗಾರರ ರೈತ ಉತ್ಪಾದಕ ಕಂಪನಿಯಿಂದ ಪಚ್ಚಲೆ ಕೃಷಿಯಲ್ಲಿ ಉದ್ಯಮ ಶೀಲತೆ ಮತ್ತು ಬೆಳವಣಿಗೆಯ ಅವಕಾಶಗಳ ಕುರಿತ ಮಾಹಿತಿ ಕಾರ್ಯಾಗಾರವು ಕಲ್ಯಾಣಪುರದ ಸುವರ್ಣ ನದಿತೀರದಲ್ಲಿ ಜರುಗಿತು.
ಐಸಿಏಆರ್ ಮತ್ತು ಸಿಎಂಎಫ್‌ಆರ್‌ಐನ ಮಂಗಳೂರು ಪ್ರಾದೇಶಿಕ ಕೇಂದ್ರದ ಪ್ರಧಾನ ವಿಜ್ಞಾನಿ ಗೀತಾ ಸಸಿಕುಮಾರ್ ಅವರು ಪಚ್ಚಲೆ ಕೃಷಿಯಲ್ಲಿ ಅತ್ಯಂತ ಕಡಿಮೆ ಶ್ರಮ ಮತ್ತು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವ ಅವಕಾಶವಿದೆ ಎಂದು ತಿಳಿಸಿ ಪಚ್ಚಲೆ ಕೃಷಿಯನ್ನು ವ್ಯವಸ್ಥಿತವಾಗಿ ಮಾಡುವ ಕುರಿತು ಪ್ರಾತ್ಯಕ್ಷಿಕೆಯ ಮೂಲಕ ಸವಿವರವಾಗಿ ತಿಳಿಸಿಕೊಟ್ಟರು. ಪಚ್ಚಲೆ ಕೃಷಿ ಮಾಡುವ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಗಳ ಕುರಿತು ತಿಳಿಸಿದರಲ್ಲದೇ ಈ ಭಾಗದ ಮೀನುಗಾರ ಮಹಿಳೆಯರು ಹಾಗೂ ಪುರುಷರು ಆರ್ಥಿಕವಾಗಿ ಸಬಲರಾಗಲು ಮಲ್ಪೆ ಮೀನುಗಾರ ರೈತ ಉತ್ಪಾದಕ ಕಂಪನಿಯಿಂದ ವತಿಯಿಂದ ಸಿಗುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳುವಂತೆ ತಿಳಿಸಿದರು.
ಸಿಎಂಎಫ್‌ಆರ್‌ಐನ ತಾಂತ್ರಿಕ ಅಧಿಕಾರಿ ನಟರಾಜ ಹಾಗೂ ವಿಜ್ಞಾನಿ ದಿವ್ಯಾ ವಿಶ್ವಂಭರ ಪಚ್ಚಲೆ ಕೃಷಿಗೆ ಸಂಬಂಧಿಸಿದ ಪೂರಕ ಮಾಹಿತಿ ನೀಡಿದರು.
ಉಡುಪಿ ಮತ್ತು ಉತ್ತರಕನ್ನಡ ಜಿಲ್ಲಾ ಸಂಯೋಜಕ ಸ್ಕೋಡ್‌ವೆಸ್ ಸಂಸ್ಥೆಯ ಗಂಗಾಧರ ನಾಯ್ಕ ಮಲ್ಪೆ ಮೀನುಗಾರರ ರೈತ ಉತ್ಪಾದಕ ಕಂಪನಿಯ ಕಾರ್ಯ ಚಟುವಟಿಕೆಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ಪಚ್ಚಲೆ ಕೃಷಿಗೆ ಸರ್ಕಾರದಿಂದ ಸಿಗುವ ಸಹಾಯದ ಕುರಿತು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಪೆ ಮೀನುಗಾರ ರೈತ ಉತ್ಪಾದಕ ಕಂಪನಿಯ ಅಧ್ಯಕ್ಷೆ ವನಜ ಪುತ್ರನ್ ವಹಿಸಿದ್ದರು.
ಕಲ್ಯಾಣಪುರ ಗ್ರಾಮ ಪಂಚಾಯತಿ ಅಧ್ಯಕ್ಷ ಕೃಷ್ಣ ದೇವಾಡಿಗ, ಮಲ್ಪೆ ಮೀನುಗಾರ ಸಂಘದ ಮಾಜಿ ಅಧ್ಯಕ್ಷ ಹಿರಿಯಣ್ಣ ಕಿದಿಯೂರು, ಕಂಪನಿಯ ನಿರ್ದೇಶಕರಾದ ಜಯಂತಿ ಮೈಂದಾನ್, ಪದ್ಮಾವತಿ, ವೇದಾವತಿ, ರೇಣುಕಾ, ವನಜಾ ಕಿದಿಯೂರು ಹಾಗೂ ಐವತ್ತಕ್ಕೂ ಹೆಚ್ಚು ಮೀನುಗಾರ ಮಹಿಳೆಯರು ಉಪಸ್ಥಿತರಿದ್ದರು.
ಕಂಪನಿಯ ಮುಖ್ಯ ಕಾರ್ಯ ನಿರ್ವಾಹಕ ವಿಷ್ಣುಪ್ರಸಾದ ಕಾಮತ್ ನಿರೂಪಿಸಿ, ವಂದಿಸಿದರು. ನಿರ್ದೇಶಕಿ ಜಯಂತಿ ಸಾಲಿಯಾನ್ ಸ್ವಾಗತಿಸಿದರು. ಕಿರಣ ಪ್ರಾರ್ಥಿಸಿದರು.