ಉಡುಪಿ: ನೀಟ್ ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ಹಾಗೂ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳು ಗಂಭೀರವಾಗಿದ್ದರೂ, ಇಂತಹ ಘಟನೆಗಳು ಕೇವಲ ನೀಟ್‌ಗೆ ಸೀಮಿತವಾಗಿಲ್ಲ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಇಂತಹ ಸಮಸ್ಯೆಗಳು ಕಂಡುಬರುತ್ತಿವೆ. ಆದ್ದರಿಂದ ಕಾಕ್ರೋಚ್ ಜನತಾ ಪಾರ್ಟಿ ಕೇವಲ ನೀಟ್ ವಿರುದ್ಧವಲ್ಲ, ಎಲ್ಲ ಪರೀಕ್ಷೆಗಳಲ್ಲಿನ ಲೋಪಗಳ ವಿರುದ್ಧ ಧ್ವನಿ ಎತ್ತಬೇಕು ಎಂದು ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಒತ್ತಾಯಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೀಟ್ ಪರೀಕ್ಷೆ ಕುರಿತಾಗಿ ಪ್ರತಿಭಟನೆ ನಡೆಸುತ್ತಿರುವ “ಕಾಕ್ರೋಚ್ ಜನತಾ ಪಾರ್ಟಿ”ಯ ನಡೆ ಸರಿಯಾದ ದಿಕ್ಕಿನಲ್ಲಿಲ್ಲ ಎಂದು ಟೀಕಿಸಿದರು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಸೂರ್ಯಕಾಂತ್ ಯುವಪೀಳಿಗೆಯನ್ನು ‘ಕಾಕ್ರೋಚ್’ ಎಂದು ಕರೆದಿರುವುದು ಸರಿಯಲ್ಲ. ಅವರ ಈ ಹೇಳಿಕೆಯಿಂದಲೇ ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರು ಹುಟ್ಟಿಕೊಂಡಿದೆ. ಇಂತಹ ಹೇಳಿಕೆಗಳು ದೇಶದ ರಾಜಧಾನಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಪರಿಸ್ಥಿತಿಗೆ ಕಾರಣವಾಗಿವೆ ಎಂದು ದೂರಿದರು.
ಜಸ್ಟಿಸ್ ಸೂರ್ಯಕಾಂತ್ ಅವರ ಹೇಳಿಕೆ ಮಹಾಭಿಯೋಗಕ್ಕೆ ಅರ್ಹವಾಗಿದ್ದು, ಅವರನ್ನು ಮುಖ್ಯ ನ್ಯಾಯಮೂರ್ತಿ ಹುದ್ದೆಯಿಂದ ತೆರವುಗೊಳಿಸಲು ಲೋಕಸಭೆಯಲ್ಲಿ ಮಹಾಭಿಯೋಗ (ಇಂಪೀಚ್‌ಮೆಂಟ್) ಪ್ರಸ್ತಾವ ಮಂಡಿಸಬೇಕು ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರನ್ನು ಒತ್ತಾಯಿಸಿದರು. ಸಾಧ್ಯವಾದರೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರೇ ಆ ಪ್ರಸ್ತಾವ ಮಂಡಿಸಲಿ ಎಂದು ಆಗ್ರಹಿಸಿದರು.
ನ್ಯಾಯಾಲಯಗಳಲ್ಲಿ ನ್ಯಾಯಾಧೀಶರು ವಕೀಲರು, ಸಾಕ್ಷಿ ಹೇಳಲು ಬರುವ ಪೊಲೀಸ್ ಅಧಿಕಾರಿಗಳು ಹಾಗೂ ಸರ್ಕಾರಿ ನೌಕರರೊಂದಿಗೆ ಅವಮಾನಕರವಾಗಿ ವರ್ತಿಸುವ ಘಟನೆಗಳು ನಡೆಯುತ್ತಿವೆ. ನ್ಯಾಯಾಂಗ ನಿಂದನೆ (ಕಾಂಟೆಂಪ್ಟ್ ಆಫ್ ಕೋರ್ಟ್) ಕೇವಲ ವಕೀಲರು ಅಥವಾ ಕಕ್ಷಿದಾರರಿಗೆ ಮಾತ್ರವಲ್ಲದೆ, ನ್ಯಾಯಾಲಯದ ಘನತೆಗೆ ಧಕ್ಕೆ ತರುವ ನ್ಯಾಯಾಧೀಶರಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.
ನೀಟ್ ಪರೀಕ್ಷೆ ದಕ್ಷಿಣ ಭಾರತದ ವಿದ್ಯಾರ್ಥಿಗಳಿಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಆರೋಪಿಸಿದ ಅವರು, 2017ರಲ್ಲಿ ನೀಟ್ ಜಾರಿಯಾದ ಬಳಿಕ ದಕ್ಷಿಣ ಭಾರತದ ಎಷ್ಟು ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆದಿದ್ದಾರೆ ಎಂಬುದರ ಕುರಿತು ರಾಜ್ಯಗಳು ವರದಿ ಸಿದ್ಧಪಡಿಸಿ ಪರಿಶೀಲನೆ ನಡೆಸಬೇಕು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಭಾರತದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಉದ್ದೇಶದಿಂದ ನೀಟ್ ಪರೀಕ್ಷೆಯನ್ನು ಜಾರಿಗೊಳಿಸಿದ್ದರು. ಆದರೆ ಈಗ ಉತ್ತರ ಭಾರತದ ವಿದ್ಯಾರ್ಥಿಗಳೇ ಕೇಂದ್ರ ಸರ್ಕಾರಕ್ಕೆ ಸಂಕಷ್ಟ ಉಂಟುಮಾಡಿದ್ದಾರೆ. ಆದ್ದರಿಂದ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಬೇಕು. ಆಗ ನಾನು ನರೇಂದ್ರ ಮೋದಿಯವರನ್ನು ಬೆಂಬಲಿಸುವುದಾಗಿ ಅನುಪಮಾ ಶೆಣೈ ಹೇಳಿದರು.















