ಮಣಿಪಾಲ: ಉಡುಪಿಯಿಂದ ಮಣಿಪಾಲ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ಇಂದ್ರಾಳಿ ರೈಲು ಸೇತುವೆ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ ಗುಂಡಿಗಳು ಬಿದ್ದು, ಕೃತಕ ಈಜುಕೊಳ ನಿರ್ಮಾಣಗೊಂಡಿದೆ.
ರಸ್ತೆಯಲ್ಲಿ ಗುಂಡಿಗಳು ಬಿದ್ದಿರುವುದರಿಂದ ವಾಹನ ಸವಾರರು ಸಂಚರಿಸಲು ಹರಸಾಹಸ ಪಡುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಹೊಂಡದಲ್ಲಿ ಬಿದ್ದಿರುವ ಬಹಳ ಘಟನೆಗಳು ನಡೆದಿವೆ.
ಪಾದಚಾರಿಗಳಂತೂ ನಡೆದುಕೊಂಡು ಹೋಗಲು ಆಗುತ್ತಿಲ್ಲ. ಮಳೆಯಿಂದ ಹೊಂಡದಲ್ಲಿ ಸಂಗ್ರವಾಗಿರುವ ಕೆಸರು ನೀರು ವಾಹನಗಳ ಚಕ್ರದ ಚಲನೆಗೆ, ಪಾದಚಾರಿಗಳ ಮೈಮೇಲೆ ಬೀಳುತ್ತಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತವು ತಕ್ಷಣವಾಗಿ ಹೆದ್ದಾರಿ ದುರಸ್ತಿಗೊಳಿಸುವಂತೆ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅವರು ಆಗ್ರಹಪಡಿಸಿದ್ದಾರೆ.
ಪ್ರಮುಖ ಹೆದ್ದಾರಿ ಇದಾಗಿರುವುದರಿಂದ ಇರುವೆ ಸಾಲಿನಂತೆ ಇಲ್ಲಿ ಲಘು- ಘನ ವಾಹನಗಳ ಸಂಚಾರದ ದಟ್ಟಣಿ ಇಲ್ಲಿರುತ್ತದೆ. ಜೀವರಕ್ಷಕ ಅಂಬ್ಯುಲೆನ್ಸ್ ವಾಹನಗಳು ಇಲ್ಲಿ ಆಮೆ ನಡಿಗೆಯಲ್ಲಿ ಸಂಚರಿಸಬೇಕಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಕ್ಲಪ್ತ ಸಮಯದಲ್ಲಿ ಆಸ್ಪತ್ರೆಗೆ ತಲುಪಿಸಲು ಅಸಾಧ್ಯತೆ ಎದುರಾಗಿದೆ. ಇಂದ್ರಾಳಿ ಪರಿಸರದಲ್ಲಿ ಹೆದ್ದಾರಿ ಉದ್ದಕ್ಕೂ ದಾರಿದೀಪದ ವ್ಯವಸ್ಥೆಯೂ ಇಲ್ಲ. ಆದ್ದರಿಂದ ಕೂಡಲೇ ಈ ಸಮಸ್ಯೆಗಳನ್ನು ಸರಿಪಡಿಸಬೇಕೆಂದು ನಾಗರಿಕ ಸಮಿತಿ ಒತ್ತಾಯಿಸಿದೆ.
ಕೂಡಲೇ ದುರಸ್ತಿ ಮಾಡದಿದ್ದರೆ ಸಂಘ ಸಂಸ್ಥೆಗಳ ನೆರವಿನೊಂದಿಗೆ ಉಗ್ರರೀತಿಯಲ್ಲಿ ಪ್ರತಿಭಟಿಸುವುದಾಗಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.