2,000 ಮರಗಳನ್ನು ಕಡಿಯಲು 48 ಗಂಟೆಯಲ್ಲಿ ಅರ್ಜಿ ಸಲ್ಲಿಸಿದ ಬೆಂಗಳೂರು ನಾಗರಿಕರು!!

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಪಾಯ ಹಾಗೂ ಅಡೆತಡೆಗಳನ್ನು ಉಂಟುಮಾಡುವ ಮರಗಳನ್ನು ಕಡಿಯಲು ಸಾರ್ವಜನಿಕರಿಗೆ ಅರ್ಜಿ ಹಾಕುವಂತೆ ಹೇಳಿತ್ತು. ಆಶ್ಚರ್ಯವೆಂದರೆ ಬರೀ 48 ಗಂಟೆಯಲ್ಲಿ 2,000 ಮರಗಳನ್ನು ಕಡಿಯಲು ಅರ್ಜಿಗಳು ಬಂದಿವೆ.
ಆದರೆ ಈ ಎಲ್ಲ ಮರಗಳನ್ನು ಕಡಿಯುವುದಿಲ್ಲ. ಸಂಚಾರಿ ಇಲಾಖೆಯೊಂದಿಗೆ ಸಮೀಕ್ಷೆ ಹಾಗೂ ಸಮಾಲೋಚನೆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅರಣ್ಯ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.

ಮರಗಳನ್ನು ಕಡಿಯುವ ಬದಲು, ಕೆಲ ಕೊಂಬೆಗಳನ್ನು ಕಡಿದು ಮರಗಳನ್ನು ಉಳಿಸುಕೊಳ್ಳುವ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಸತ್ತ ಮರಗಳು ಅತೀ ಹಳೆಯ ಮರಗಳ ಬಗ್ಗೆ ಆಲೋಚನೆ ಮಾಡಲಾಗುತ್ತಿದೆ. ಜೀವ ಇಲ್ಲದೆ ಎಂದಾದರೂ ಏಕಾಏಕಿ ಬಿದ್ದು ಹೋದರೆ ಸಾಕಷ್ಟು ಜನರಿಗೆ ಹಾನಿ ಹಾಗೂ ಸಂಚಾರಕ್ಕೆ ತೊಂದರೆಯಾಗುತ್ತದೆ. ಮರಗಳ ಪಟ್ಟಿ ಮಾಡಿ, ಸ್ಥಳಾಂತರದ ಬಗ್ಗೆ ಆಲೋಚಿಸಿದರೆ ಹಸಿರು ಉಳಿಸಬಹುದು ಎಂದೂ ಆಲೋಚಿಸಲಾಗುತ್ತಿದೆ.

ಒಂದೆಡೆ ಬರಗಾಲ, ಏರುತ್ತಿರುವ ಉಷ್ಣಾಂಶ, ಪರಿಸರ ಮಾಲಿನ್ಯ, ನೀರಿಗೆ ಬರ, ತೀರದ ದಾಹ. ಹಾಗಿದ್ದರೂ ಜನರು 2000 ಮರಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿದು ಹಾಕಲು ಅರ್ಜಿ ಸಲ್ಲಿಸಿರುವುದು ಪ್ರಜ್ಞಾವಂತರಲ್ಲಿ ಅಚ್ಚರಿ ಹಾಗೂ ಖೇದವನ್ನುಂಟುಮಾಡಿದೆ.