ಸಂಸತ್ ರಕ್ಷಣೆ ಇನ್ನು ಮುಂದೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹೆಗಲಿಗೆ; ಭದ್ರತಾ ಲೋಪ ಬಳಿಕ ಎಚ್ಚೆತ್ತ ಕೇಂದ್ರ ಗೃಹ ಸಚಿವಾಲಯ

ನವದೆಹಲಿ: ಡಿಸೆಂಬರ್ 13 ರಂದು ನಡೆದ ಭದ್ರತಾ ಉಲ್ಲಂಘನೆಯ ಘಟನೆಯ ಬಳಿಕ ಹೊಸ ಸಂಸತ್ತಿನ ಕಟ್ಟಡ ಸಂಕೀರ್ಣದ “ಸಮಗ್ರ ಭದ್ರತೆ” ಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ವಹಿಸಿಕೊಳ್ಳಲಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಕೇಂದ್ರ ಗೃಹ ಸಚಿವಾಲಯವು ಸಂಸತ್ತಿನ ಕಟ್ಟಡ ಸಂಕೀರ್ಣದ ಸಮೀಕ್ಷೆಗೆ ಬುಧವಾರ ನಿರ್ದೇಶನ ನೀಡಿದ್ದು, ಇದರಿಂದ “ಸಿಐಎಸ್‌ಎಫ್ ಭದ್ರತೆ ಮತ್ತು ಅಗ್ನಿಶಾಮಕ ವಿಭಾಗವನ್ನು ಸಮಗ್ರ ಮಾದರಿಯಲ್ಲಿ ನಿಯಮಿತವಾಗಿ ನಿಯೋಜನೆ” ಮಾಡಬಹುದಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

CISF ಒಂದು ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯಾಗಿದ್ದು, ಇದು ಪ್ರಸ್ತುತ ಅನೇಕ ಕೇಂದ್ರ ಸರ್ಕಾರದ ಸಚಿವಾಲಯದ ಕಟ್ಟಡಗಳ ಭದ್ರತೆಯಲ್ಲಿ ನಿಯೋಜಿಸಲಾಗಿದೆ. ಜೊತೆಗೆ ಪರಮಾಣು ಮತ್ತು ಅಂತರಿಕ್ಷ ಯಾನ ಪ್ರದೇಶ, ನಾಗರಿಕ ವಿಮಾನ ನಿಲ್ದಾಣಗಳು ಮತ್ತು ದೆಹಲಿ ಮೆಟ್ರೋಗಳಿಗೆ ಭದ್ರತೆ ನೀಡುತ್ತಿದೆ.

ಕೇಂದ್ರ ಸರ್ಕಾರದ ಸಚಿವಾಲಯಗಳನ್ನು ಕಾಪಾಡುವ ಸಿಐಎಸ್‌ಎಫ್‌ನ ಸರ್ಕಾರಿ ಕಟ್ಟಡ ಭದ್ರತಾ ಘಟಕದ ತಜ್ಞರು ಮತ್ತು ಪ್ರಸ್ತುತ ಸಂಸತ್ತಿನ ಭದ್ರತಾ ತಂಡದ ಅಧಿಕಾರಿಗಳೊಂದಿಗೆ ಪಡೆಯ ಅಗ್ನಿಶಾಮಕ ಮತ್ತು ಪ್ರತಿಕ್ರಿಯೆ ಅಧಿಕಾರಿಗಳು ಈ ವಾರದ ಕೊನೆಯಲ್ಲಿ ಸಮೀಕ್ಷೆಯನ್ನು ಕೈಗೊಳ್ಳಲಿದ್ದಾರೆ ಎಂದು ಪಿಟಿಐ ವರದಿ ತಿಳಿಸಿದೆ.

ಲೋಕಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗ ಸಾಗರ್ ಶರ್ಮಾ ಮತ್ತು ಮನೋರಂಜನ್ ಎನ್ನುವ ವ್ಯಕ್ತಿಗಳು ಗ್ಯಾಲರಿಯಿಂದ ಲೋಕಸಭೆಗೆ ಧುಮುಕಿದ್ದು, ತಮ್ಮ ಬೂಟುಗಳೊಳಗೆ ಬಚ್ಚಿಟ್ಟ ಡಬ್ಬಿಗಳಿಂದ ಲೋಕಸಭೆಯೊಳಗೆ ಹಳದಿ ಹೊಗೆಯನ್ನು ಎರಚಿದ್ದರು. ಅದೃಷ್ಟವಶಾತ್ ಹೊಗೆ ಅಪಾಯಕಾರಿಯಾಗಿರಲಿಲ್ಲ. ವ್ಯಕ್ತಿಗಳನ್ನು ಸಂಸದರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದರು. ಸಂಸತ್ ಭವನದಲ್ಲಿ ಈ ಪ್ರಮಾಣದ ಭದ್ರತಾ ಲೋಪವು ದೇಶವನ್ನು ಬೆಚ್ಚಿ ಬೀಳಿಸಿತ್ತು. ಇದೀಗ ಕೇಂದ್ರ ಗೃಹ ಸಚಿವಾಲಯವು ಎಚ್ಚೆತ್ತುಕೊಂಡಿದ್ದು CISF ಹೆಗಲಿದೆ ಭದ್ರತೆಯ ಹೊಣೆಯನ್ನು ವರ್ಗಾಯಿಸಿದೆ.