ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮೀ ಅನುಮಾನಸ್ಪದವಾಗಿ ಸಾವು

ಬೆಂಗಳೂರು: ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮೀ (33) ಅವರ ಮೃತದೇಹ ಬೆಂಗಳೂರಿನ ಸ್ನೇಹಿತನ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದೀಗ ಸಾವಿನ ಬಗ್ಗೆ ಸಾಕಷ್ಟು ಶಂಕೆ ವ್ಯಕ್ತವಾಗಿದೆ.

ನಿನ್ನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರದಲ್ಲಿರುವ ಪರಿಚಿತರ ಮನೆಯಲ್ಲಿ ಪಾರ್ಟಿಗೆಂದು ಹೋಗಿದ್ದರು. ಊಟದ ಬಳಿಕ ಅವರು ಅಲ್ಲೇ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಲಕ್ಷ್ಮೀ ಅವರ ಗಂಡ ಹೈದರಾಬಾದ್ ಗೆ ತೆರಳಿದ್ದರು.

ಅವರು ಕಳೆದ ಕೆಲ ತಿಂಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಈ ಕಾರಣದಿಂದ ಲಕ್ಷ್ಮೀ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಲಕ್ಷ್ಮೀ ತಂದೆ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಆಕೆ ಆತ್ಮಹತ್ಯೆ ಮಾಡಿಕೊಳ್ಳುವವಳಾಗಿದ್ದಾಳೆ ತನ್ನ ಮನೆಯಲ್ಲಿಯೇ ಆತ್ಮಹತ್ಯೆ ಮಾಡುತ್ತಿದ್ದಳು. ಸ್ನೇಹಿತರ ಮನೆಯಲ್ಲಿ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಳು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಸಾವಿನ ಬಗ್ಗೆ ತನಿಖೆ ಕೈಗೊಂಡಿದ್ದಾರೆ.

ಲಕ್ಷ್ಮೀ 2014ರ ಬ್ಯಾಚ್​ನ ಕೆಎಸ್​ಪಿಎಸ್ ಅಧಿಕಾರಿ. 2017ರಲ್ಲಿ ಸಿಐಡಿ ಡಿವೈಎಸ್​ಪಿಯಾಗಿ ಅವರು ನೇಮಕಗೊಂಡಿದ್ದರು.