ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್‌ ಆಚರಣೆ; ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ

ಉಡುಪಿ: ಕೊರೋನಾ ಭೀತಿಯ ನಡುವೆಯೂ ಏಸು ಕ್ರಿಸ್ತರ ಜನ್ಮದಿನವಾದ ಕ್ರಿಸ್ಮಸ್‌ ಹಬ್ಬವನ್ನು ಕ್ರೈಸ್ತ ಬಾಂಧವರು ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ಭಕ್ತಿ, ಶ್ರದ್ಧೆ, ಸಂಭ್ರಮ ಸಡಗರದಿಂದ ಆಚರಿಸಿದರು.

ಶುಕ್ರವಾರ ರಾತ್ರಿ ಜಿಲ್ಲೆಯ ಎಲ್ಲಾ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ, ಕ್ರಿಸ್ಮಸ್‌ ಗೀತೆಗಳ ಗಾಯನ, ಕಾರ್ಯಕ್ರಮಗಳು ಜರುಗಿದವು.

ಹಬ್ಬದ ವಿಶೇಷ ಬಲಿಪೂಜೆಯನ್ನು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರಾದ ಅತಿ ವಂ.ಡಾ.ಜೆರಾಲ್ಡ್ ಐಸಾಕ್‌ ಲೋಬೊ ತಮ್ಮ ಅಧಿಕೃತ ಚರ್ಚ್‌ ಕಲ್ಯಾಣಪುರದ ಮಿಲಾಗ್ರಿಸ್‌ ಕೆಥೆಡ್ರಲ್‌ನಲ್ಲಿ ಬಲಿಪೂಜೆ ಅರ್ಪಿಸಿ ಹಬ್ಬದ ಸಂದೇಶ ನೀಡಿದರು. ಈ ವೇಳೆ ಚರ್ಚಿನ ರೆಕ್ಟರ್‌ ವಂ|ವಲೇರಿಯನ್‌ ಮೆಂಡೊನ್ಸಾ, ಸಹಾಯಕ ಧರ್ಮಗುರು ವಂ|ಜೋಯ್‌ ಅಂದ್ರಾದೆ ಉಪಸ್ಥಿತರಿದ್ದರು.

ದೇವಪುತ್ರ ಈ ಲೋಕದಲ್ಲಿ ಮುಗ್ಧ ಮಗುವಾಗಿ ಜನಿಸಿ, ಪಾಪವೊಂದನ್ನು ಬಿಟ್ಟು ಇನ್ನೆಲ್ಲದರಲ್ಲಿಯೂ ನಮ್ಮಂತೆಯೇ ಆಗಬಯಸಿದ ಯೇಸುಸ್ವಾಮಿ ಬಡವರಿಗೆ ಆಶಾಕಿರಣವಾಗಿ, ದುಃಖಿತರಿಗೆ ಸಾಂತ್ವನವಾಗಿ, ದೀನ ದಲಿತರ ಸಂಗಾತಿಯಾಗಿ, ನೊಂದವರ ಭರವಸೆಯಾಗಿ, ಬಹಿಷ್ಕೃತರ ಗೆಳೆಯನಾಗಿ ಬಂದರು.

ಕಳೆದೆರಡು ವರ್ಷಗಳಿಂದ ಇಡೀ ವಿಶ್ವವೇ ಕೊರೋನ ಸೋಂಕಿನ ಅಟ್ಟಹಾಸಕ್ಕೆ ನಲುಗಿಹೋಗಿದ್ದು, ಸಾವಿರಾರು ಜನರು ಈ ಸೋಂಕಿಗೆ ಒಳಗಾಗಿದ್ದಾರೆ. ಲಕ್ಷಾಂತರ ಕುಟುಂಬಗಳು ನಿರುದ್ಯೋಗ ಹಾಗೂ ಬಡತನಕ್ಕೆ ಬಲಿಯಾಗಿವೆ. ಬಸವಳಿದ ಈ ಲೋಕಕ್ಕೆ ಹೊಸ ಜೀವವನ್ನು ನೀಡುವ ಅಗತ್ಯವಿದೆ. ಕ್ರಿಸ್ತರ ಜನನದ ಕ್ರಿಸ್‍ಮಸ್ ಹಬ್ಬದ ಆಚರಣೆಯು ನಮ್ಮಲ್ಲಿ ಮಾನವೀಯತೆಯನ್ನು ಜೀವಂತಗೊಳಿಸಿ, ಮನುಷ್ಯನಿಗೆ ಮಾನವೀಯತೆಯು ಮರೀಚಿಕೆಯಾಗದೆ ಸ್ವಾತಂತ್ರ್ಯ, ಶಾಂತಿ, ಭಾವೈಕ್ಯತೆ, ಕ್ಷಮೆ, ಪ್ರೀತಿ, ಸಹನೆ, ಸಂಯಮ ಮತ್ತು ನೈತಿಕತೆಯನ್ನು ತನ್ನ ಉಸಿರಾಗಿಸಲಿ ಎಂದು ತಮ್ಮ ಸಂದೇಶದಲ್ಲಿ ತಿಳಿಸಿದರು.

ಬಲಿಪೂಜೆಯ ಮುನ್ನ ಯೇಸುವಿನ ಜನನ ವೃತ್ತಾಂತವನ್ನು ನಟನೆಯ ಮೂಲಕ ಚರ್ಚಿನ ಕಲಾವಿದರು ಆಕರ್ಷಕವಾಗಿ  ಪ್ರಸ್ತುತ ಪಡಿಸಿದರು.

ಕ್ರಿಸ್ಮಸ್‌ ಹಬ್ಬದ ಪ್ರಯುಕ್ತ ಇಡಿ ಜಿಲ್ಲೆಯ ಚರ್ಚ್‌ಗಳು ವರ್ಣಮಯ ವಿದ್ಯುತ್‌ ದೀಪಾಲಂಕಾರ ಹಾಗೂ ಬಗೆ ಬಗೆಯ ಚಿತ್ತಾಕರ್ಷಕ ನಕ್ಷತ್ರಗಳಿಂದ ಕಂಗೊಳಿಸುತ್ತಿದ್ದವು.

ಶುಕ್ರವಾರ ರಾತ್ರಿ ಪೂಜೆಯ ವೇಳೆ ಸಿಂಗರಿಸಿಟ್ಟ ಗೋದಲಿಯಲ್ಲಿ ಬಾಲಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತಾದಿಗಳು ಆರಾಧಿಸಿದರು. ಮೇಣದ ಬತ್ತಿಗಳನ್ನು ಬೆಳಗಿ ಹೂವು ಸುಗಂಧಗಳನ್ನು ಅರ್ಪಿಸುವುದರ ಮೂಲಕ ಯೇಸು ಸ್ವಾಮಿಯ ಜನನವನ್ನು ಸ್ವಾಗತಿಸಲಾಯಿತು.

ಜಿಲ್ಲೆಯ ಪ್ರಮುಖದ ಚರ್ಚುಗಳಾದ ಶಿರ್ವ ಆರೋಗ್ಯ ಮಾತೆಯ ದೇವಾಲಯದಲ್ಲಿ ಧರ್ಮಗುರು ವಂ.ಡೆನಿಸ್‌ ಡೇಸಾ, ಉಡುಪಿ ಶೋಕಮಾತಾ ಇಗರ್ಜಿಯಲ್ಲಿ ಧರ್ಮಗುರು ವಂ.ಚಾರ್ಲ್ಸ್‌ ಮಿನೇಜಸ್, ಕುಂದಾಪುರ ಹೊಲಿ ರೋಸರಿ ಚರ್ಚ್‌ನಲ್ಲಿ ವಂ.ಸ್ಟ್ಯಾನಿ ತಾವ್ರೊ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್‌ ಬಾಸಿಲಿಕಾದಲ್ಲಿ ವಂ.‌ ಆಲ್ಬನ್ ಡಿಸೋಜಾ ಅವರ ನೇತೃತ್ವದಲ್ಲಿ ಕ್ರಿಸ್ಮಸ್‌ ಆಚರಣೆಯ ಬಲಿಪೂಜೆ ನೆರವೇರಿಸಲಾಯಿತು.‌

ಕೊರೋನಾ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಕೇವಲ ಧಾರ್ಮಿಕ ಕಾರ್ಯಕ್ರಮಗಳಿಗೆ ಸರಕಾರ ಅವಕಾಶ ನೀಡಿರುವುದರಿಂದ ಧರ್ಮಪ್ರಾಂತ್ಯದ ಚರ್ಚುಗಳಲ್ಲಿ ಬಲಿಪೂಜೆಯ ಬಳಿಕ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು. ಪೂಜೆಯ ಸಂದರ್ಭದಲ್ಲಿ ಎಲ್ಲಾ ಚರ್ಚುಗಳಲ್ಲಿ ಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲಾಗಿತ್ತು.

ಬಲಿಪೂಜೆಯ ಬಳಿಕ ಕ್ರೈಸ್ತ ಭಾಂಧವರು ಪರಸ್ಪರ ಕ್ರಿಸ್ಮಸ್‌ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.