ಸ್ವಾತಂತ್ರ್ಯದ ಮುನ್ನಾ ದಿನ ಪಾಕಿಸ್ತಾನಕ್ಕೆ ಆಘಾತ: ಬಲೂಚಿಸ್ತಾನದಲ್ಲಿ ಚೀನಾ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲೆ ದಾಳಿ

ಬಲೀಚಿಸ್ತಾನ: ಆದಿತ್ಯವಾರದಂದು ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಚೀನಾದ ಇಂಜಿನಿಯರ್‌ಗಳ ಬೆಂಗಾವಲು ಪಡೆಯ ಮೇಲೆ ಸಶಸ್ತ್ರ ಬಂಡುಕೋರರು ಭಾನುವಾರ ದಾಳಿ ನಡೆಸಿದ್ದಾರೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಭದ್ರತಾ ಪಡೆಗಳು ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರನ್ನು ಕೊಂದಿದ್ದಾರೆ.

ಗ್ವಾದರ್‌ನ ಫಕೀರ್ ಸೇತುವೆಯ ಮೇಲೆ ಚೀನಾದ ನಿರ್ಮಾಣ ಕಂಪನಿಯಲ್ಲಿ ಕೆಲಸ ಮಾಡುವ ಇಂಜಿನಿಯರ್‌ಗಳ ಬೆಂಗಾವಲು ವಾಹನದ ಮೇಲಿನ ದಾಳಿಯಲ್ಲಿ ಇಬ್ಬರು ಪಾಕಿಸ್ತಾನಿ ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ, ಇತರ ಭಯೋತ್ಪಾದಕರು ಗಾಯಗೊಂಡ ಸ್ಥಿತಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ ಮತ್ತು ಗುಂಡಿನ ಚಕಮಕಿ ಮುಂದುವರೆದಿದ್ದು, ಪ್ರದೇಶವನ್ನು ತೆರವುಗೊಳಿಸಲು ಕಾರ್ಯಾಚರಣೆ ನಡೆಯುತ್ತಿದೆ.

ಬಂದರು ನಗರವಾದ ಗ್ವಾದರ್‌ನಾದ್ಯಂತ ಸ್ಫೋಟಗಳು ಮತ್ತು ಗುಂಡಿನ ಸದ್ದು ಕೇಳಿಬರುತ್ತಿದೆ, ಅಲ್ಲಿ ಎಲ್ಲಾ ರಸ್ತೆಗಳು ಸಂಚಾರಕ್ಕಾಗಿ ಮುಚ್ಚಲ್ಪಟ್ಟಿವೆ ಎಂದು ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದೆ.

ಬಲೂಚ್ ಲಿಬರೇಶನ್ ಆರ್ಮಿ – ಮಜೀದ್ ಬ್ರಿಗೇಡ್, ಆತ್ಮಹತ್ಯಾ ದಳ, ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ. ಮುಂದಿನ ಆದೇಶದವರೆಗೆ ಬಲೂಚಿಸ್ತಾನ ಮತ್ತು ಸಿಂಧ್‌ನಲ್ಲಿರುವ ತನ್ನ ನಾಗರಿಕರು ತಮ್ಮ ನಿವಾಸಗಳಲ್ಲಿಯೇ ಇರುವಂತೆ ಪಾಕಿಸ್ತಾನದಲ್ಲಿರುವ ಚೀನಾದ ದೂತಾವಾಸಗಳು ಆದೇಶ ಹೊರಡಿಸಿವೆ ಎಂದು ವರದಿ ತಿಳಿಸಿದೆ.

ನಿನ್ನೆಯ ದಾಳಿಯ ನಂತರ, ಬಲೋಚ್ ಲಿಬರೇಶನ್ ಆರ್ಮಿ 90 ದಿನಗಳ ಅಲ್ಟಿಮೇಟಮ್ ಅನ್ನು ಹೊರಡಿಸಿದೆ ಮತ್ತು ಚೀನಾ ವಿರುದ್ಧ ಹೊಸ ಸರಣಿಯ ದಾಳಿಯ ಬೆದರಿಕೆ ಹಾಕಿದೆ. “ಚೀನಾ ತನ್ನ ಯೋಜನೆಗಳನ್ನು ಮುಚ್ಚಲು ವಿಫಲವಾದರೆ ಮತ್ತು ಮುಂದಿನ 90 ದಿನಗಳಲ್ಲಿ ಬಲೂಚಿಸ್ತಾನದಿಂದ ಹಿಂದೆ ಸರಿಯದಿದ್ದರೆ, ಬಲೂಚ್ ವಿಮೋಚನಾ ಸೇನೆಯು ಚೀನಾ ವಿರುದ್ಧ ದಾಳಿಯ ಸಂಖ್ಯೆ ಮತ್ತು ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ” ಎಂದಿದೆ.