ಭಾರತದಲ್ಲಿ ಚೀನಾ ಕಂಪೆನಿಯ ಬೇಹುಗಾರಿಕೆ: ಪ್ರಧಾನಿ, ರಾಷ್ಟ್ರಪತಿ, ಸೇನಾ ಮುಖ್ಯಸ್ಥರ ಮಾಹಿತಿ ಸಂಗ್ರಹಕ್ಕೆ ಸಂಚು

ನವದೆಹಲಿ: ಪ್ರಧಾನಿ, ಮುಖ್ಯಮಂತ್ರಿಗಳು, ಮಿಲಿಟರಿ, ಉದ್ಯಮಿಗಳು, ರಕ್ಷಣಾ ಸಚಿವಾಲಯ ಸಿಬ್ಬಂದಿ, ಸಂಸದರು ಕೆಲವು ರೌಡಿಶೀಟರ್ ಗಳು ಸೇರಿದಂತೆ ಪ್ರತಿದಿನ ಭಾರತದ 150 ದಶಲಕ್ಷಗಳ ಆನ್ ಲೈನ್ ಡೇಟಾವನ್ನು ಚೀನಾ ಮೂಲದ ಸಂಸ್ಥೆ ಕಲೆಹಾಕಿರುವ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ.

ಭಾರತದೊಂದಿಗೆ ಪೂರ್ವ ಲಡಾಖ್ ಗಡಿಯಲ್ಲಿ ಸಂಘರ್ಷಕ್ಕೆ ಇಳಿದಿರುವ ಚೀನಾ ಇದೀಗ ದೇಶದ ಪ್ರತಿಷ್ಠಿತ ವ್ಯಕ್ತಿಗಳ ಮೇಲೆ ಕಳ್ಳಗಣ್ಣು ನೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್, ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಸೇರಿದಂತೆ ಬರೋಬ್ಬರಿ 1,350ಕ್ಕೂ ಹೆಚ್ಚು ರಾಜಕಾರಣಿಗಳ ಡೇಟಾ ಸಂಗ್ರಹಿಸುತ್ತಿದೆ ಎಂಬ ಆಘಾತಕಾರಿ ಸುದ್ದಿ ಹೊರಬಿದ್ದಿದೆ.

ಚೀನಾದ ಕಮ್ಯೂನಿಸ್ಟ್ ಪಾರ್ಟಿ ಮತ್ತು ಚೀನಾ ಸರ್ಕಾರ ಜೊತೆ ಸಂಪರ್ಕವಿರುವ ಶೆನ್ ಜೆನ್ ಹುವಾ ಎಂಬ ಸಂಸ್ಥೆ ಭಾರತದ ಗಣ್ಯರ ಮಾಹಿತಿಗಳನ್ನು ಕಲೆ ಹಾಕುತ್ತಿದೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ.

ಇದೇ ವೇಳೆ ಭಾರತದ ರಕ್ಷಣಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಸೇನೆಯ 60ಕ್ಕೂ ಹೆಚ್ಚು ಹಿರಿಯ ಅಧಿಕಾರಿಗಳು, ನಿವೃತ್ತಿ ಅಧಿಕಾರಿಗಳು, ವಾಯುಪಡೆ, ನೌಕದಳ, ಭೂಸೇನೆಯ 14 ಹೆಚ್ಚು ನಿವೃತ್ತ ಮುಖ್ಯಸ್ಥರು, ಇಸ್ರೋ ಅಣುವಿಜ್ಞಾನಿಗಳ ಆನ್ ಲೈನ್ ಡೇಟಾ ಸಂಗ್ರಹಿಸಿದೆ.