ನೇಪಾಳಕ್ಕೆ ಮತ್ತೆ ಚೀನಾ ಎಚ್ಚರಿಕೆ: ಯಾವ ಕ್ಷಣದಲ್ಲಾದರೂ ಒಡೆಯಬಹುದು ಬ್ಯಾರಿಯರ್ ಲೇಕ್!

ಕಠ್ಮಂಡು: ವಿನಾಶಕಾರಿ ಹಠಾತ್ ಪ್ರವಾಹದಿಂದ ತತ್ತರಿಸಿರುವ ನೇಪಾಳಕ್ಕೆ ಚೀನಾ ಮತ್ತೊಂದು ಎಚ್ಚರಿಕೆ ನೀಡಿದೆ. ಲ್ಹೆಂಡೆ ನದಿ ದಂಡೆಯ ಮೇಲ್ಭಾಗದಲ್ಲಿ ಇತ್ತೀಚೆಗೆ ರೂಪುಗೊಂಡಿರುವ ನೈಸರ್ಗಿಕ ಬ್ಯಾರಿಯರ್ ಲೇಕ್‌ (ಸರೋವರ) ಯಾವುದೇ ಕ್ಷಣದಲ್ಲಿ ಒಡೆದುಹೋಗುವ ಅಪಾಯವಿದೆ ಎಂದು ಚೀನಾ ಎಚ್ಚರಿಸಿದೆ.

ಸರೋವರದ ನೀರಿನ ಬಣ್ಣ ದಿನದಿಂದ ದಿನಕ್ಕೆ ಗಾಢವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಇದು ಸರೋವರದ ಸ್ಥಿತಿ ಬಿಗಡಾಯಿಸುತ್ತಿರುವ ಸೂಚನೆಯಾಗಿರಬಹುದು ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ವೇಳೆ ನೈಸರ್ಗಿಕ ಅಣೆಕಟ್ಟು ಒಡೆದು ಸರೋವರದ ನೀರು ನದಿಗೆ ಹರಿದರೆ, ಗರಿಷ್ಠವಾಗಿ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್‌ ನೀರು ಹರಿಯುವ ಸಾಧ್ಯತೆಯಿದೆ. ಆದರೆ ಇದರಿಂದ ದೊಡ್ಡ ಪ್ರಮಾಣದ ಪ್ರವಾಹ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನೇಪಾಳದ ವಿದೇಶಾಂಗ ಸಚಿವಾಲಯದೊಂದಿಗೆ ಹಂಚಿಕೊಂಡಿರುವ ಸಂದೇಶದಲ್ಲಿ, “ಎರಡು ದಿನಗಳ ಹಿಂದೆ ರೂಪುಗೊಳ್ಳಲು ಆರಂಭಿಸಿದ ಸರೋವರದ ನೀರಿನ ಬಣ್ಣ ನಿರಂತರವಾಗಿ ಗಾಢವಾಗುತ್ತಿದೆ. ಇದು ಸರೋವರ ಯಾವುದೇ ಕ್ಷಣದಲ್ಲಿ ಒಡೆಯುವ ಸಾಧ್ಯತೆಯಿರುವುದನ್ನು ಸೂಚಿಸುತ್ತದೆ” ಎಂದು ಚೀನಾ ತಿಳಿಸಿದೆ.

ಸರೋವರದಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ ದೊಡ್ಡದಾಗಿಲ್ಲದ ಕಾರಣ, ಕೆಳಭಾಗದ ನದಿಗಳಲ್ಲಿ ನೀರಿನ ಹರಿವು ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಬಹುದು. ಆದರೆ ಗಮನಾರ್ಹ ಮಟ್ಟದಲ್ಲಿ ನೀರಿನ ಏರಿಕೆಯಾಗುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಆದಾಗ್ಯೂ, ನದಿ ತೀರದ ಕೆಳಭಾಗದಲ್ಲಿ ವಾಸಿಸುವ ಜನರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಹಿಮನದಿ ಕುಸಿತದಿಂದ ಸರೋವರ ನಿರ್ಮಾಣ

ನೇಪಾಳ ಮತ್ತು ಟಿಬೆಟ್ ಪ್ರದೇಶಗಳಲ್ಲಿ ಭೀಕರ ಹಠಾತ್ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಬಳಿಕ ಈ ತಾತ್ಕಾಲಿಕ ಸರೋವರ ನಿರ್ಮಾಣವಾಗಿದೆ. ಹಿಮನದಿ ಕುಸಿದು ಕೆಳಕ್ಕೆ ಹರಿದು ಬಂದ ಅವಶೇಷಗಳು ನೈಸರ್ಗಿಕ ಅಣೆಕಟ್ಟಿನಂತೆ ರೂಪುಗೊಂಡಿದ್ದು, ಇದರ ಪರಿಣಾಮವಾಗಿ ಸರೋವರ ಸೃಷ್ಟಿಯಾಗಿದೆ.

ಚೀನಾದ ಭಾಗದಲ್ಲಿರುವ ಚೋಚೆನ್ ನದಿ ಹಾಗೂ ನೇಪಾಳದ ಭಾಗದಲ್ಲಿರುವ ಪುರೇಪು ನದಿ ಸೇರುವ ಪ್ರದೇಶದ ಸಮೀಪ ಈ ಸರೋವರ ನಿರ್ಮಾಣವಾಗಿದೆ.

ಸರೋವರ ಒಡೆದರೆ ಏನಾಗಬಹುದು?

ಸರೋವರ ಒಡೆದ ಸಂದರ್ಭದಲ್ಲಿ ಉಂಟಾಗಬಹುದಾದ ಪ್ರವಾಹದ ಪರಿಣಾಮವನ್ನು ಅಂದಾಜಿಸಲು ಚೀನಾ ಈಗಾಗಲೇ ಫ್ಲಡ್ ಮಾಡೆಲಿಂಗ್ ನಡೆಸಿದೆ.

ನೈಸರ್ಗಿಕ ಅಣೆಕಟ್ಟಿನ ಒಂದು ಭಾಗ ಒಡೆದರೆ ನದಿ ವ್ಯವಸ್ಥೆಗೆ ಹರಿಯುವ ನೀರಿನ ಗರಿಷ್ಠ ಪ್ರಮಾಣ ಸೆಕೆಂಡಿಗೆ 500 ಕ್ಯುಬಿಕ್ ಮೀಟರ್‌ ತಲುಪಬಹುದು ಎಂದು ಚೀನಾ ಅಂದಾಜಿಸಿದೆ. ಆದರೆ ನೀರು ಬಹುತೇಕ ನದಿಯ ದಡಗಳ ಒಳಗೇ ಹರಿಯುವ ಸಾಧ್ಯತೆಯಿದ್ದು, ಭಾರೀ ಪ್ರಮಾಣದಲ್ಲಿ ನದಿ ದಡ ಮೀರುವ ಸಾಧ್ಯತೆ ಕಡಿಮೆ ಎಂದು ತಿಳಿಸಲಾಗಿದೆ.

ಇದಕ್ಕೂ ಮುನ್ನ ಚೀನಾ, ಮುಂದಿನ ಮೂರು ದಿನಗಳಲ್ಲಿ ಸರೋವರಕ್ಕೆ ಇನ್ನೂ 30 ಲಕ್ಷ ಕ್ಯುಬಿಕ್ ಮೀಟರ್‌ ನೀರು ಸೇರುವ ಸಾಧ್ಯತೆಯಿದೆ ಎಂದು ಎಚ್ಚರಿಸಿತ್ತು.

ಅಪಾಯದ ಹಿನ್ನೆಲೆಯಲ್ಲಿ ಚೀನಾ ಈ ಪ್ರದೇಶದ ಮೇಲೆ ನಿರಂತರ ನಿಗಾ ಇರಿಸಿದೆ. ಡ್ರೋನ್‌ಗಳು ಹಾಗೂ ಉಪಗ್ರಹಗಳ ಮೂಲಕ ಸರೋವರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಮೇಲೆ ಮೇಲ್ವಿಚಾರಣೆ ನಡೆಸಲಾಗುತ್ತಿದೆ. ಸರೋವರದ ನೀರಿನ ಮಟ್ಟ, ಬಣ್ಣ ಹಾಗೂ ನೈಸರ್ಗಿಕ ಅಣೆಕಟ್ಟಿನ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ.