ಉಡುಪಿ : ಇಂದು ಟಿವಿ, ಸಾಮಾಜಿಕ ಜಾಲತಾಣಗಳು ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಮಕ್ಕಳ ಪ್ರತಿಭೆಗೆ ಹೆಚ್ಚಿನ ಅವಕಾಶ ಸಿಗುತ್ತಿದೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ಪ್ರೋತ್ಸಾಹ ನೀಡಿದರೆ ಭವಿಷ್ಯದಲ್ಲಿ ದೇಶಕ್ಕೆ ಒಬ್ಬ ಶ್ರೇಷ್ಠ ಸಾಧಕನನ್ನು ನೀಡಿದಂತಾಗುತ್ತದೆ ಎಂದು ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ಶಿವರಾಮ ಶೆಟ್ಟಿ ತಲ್ಲೂರು ಹೇಳಿದರು.
ಅವರು ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿ ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ ವತಿಯಿಂದ ಹಮ್ಮಿಕೊಂಡ ಕರ್ನಾಟಕ ಮಕ್ಕಳ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಕಲಿಕೆಗೆ ವಯಸ್ಸಿನ ನಿರ್ಬಂಧವಿಲ್ಲ. ಆದರೆ ಕಲಿಯಬೇಕು ಎನ್ನುವ ಛಲ, ಆಸಕ್ತಿ ಇದ್ದರೆ ಹೆಚ್ಚಿನದ್ದನ್ನು ಸಾಧಿಸಬಹುದು. ತಮ್ಮ ಮಗುವಿನ ಸುಪ್ತ ಪ್ರತಿಭೆಯನ್ನು ಗುರುತಿಸಿ, ಪ್ರೋತ್ಸಾಹಿಸುವ ಕಾರ್ಯವನ್ನು ತಂದೆ-ತಾಯಿ ಮಾಡಬೇಕು. ಹೀಗಾದಾಗ ಮಗುವಿನಲ್ಲಿ ಆತ್ಮ ವಿಶ್ವಾಸ ಬೆಳೆಯುತ್ತದೆ. ಮುಂದೆ ಶಾಲೆಯಲ್ಲಿ ಶಿಕ್ಷಕರು, ಸಂಘ ಸಂಸ್ಥೆಗಳು ಅವರ ಪ್ರತಿಭೆಗೆ ವೇದಿಕೆ ನೀಡಿದಾಗ ಅವರ ಪ್ರತಿಭೆ ಅರಳಲು ಸಾಧ್ಯವಾಗುತ್ತದೆ ಎಂದ ಅವರು ತಾವು 60ರ ಹರೆಯಲ್ಲಿ ಯಕ್ಷಗಾನವನ್ನು ಕಲಿತು ಒಬ್ಬ ಸಮರ್ಥ ಯಕ್ಷಗಾನ ಕಲಾವಿದನಾದ ಬಗೆ ವಿವರಿಸಿದರು. ಮಕ್ಕಳು ಇಂತಹ ವಿಷಯಗಳಿಂದ ಪ್ರೇರಣೆ ಪಡೆಯಬೇಕು ಎಂದು ಕರೆ ನೀಡಿದರು.
ಪುನರೂರು ಕ್ಷೇತ್ರದ ಧರ್ಮದರ್ಶಿ ಹರಿಕೃಷ್ಣ ಪುನರೂರು ಮಾತನಾಡಿ, ಮಕ್ಕಳ ಕನ್ನಡ ಓದು ಬರಹಕ್ಕೆ ಮನ್ನಣೆ ಕೊಡದಿದ್ದರೆ ಕನ್ನಡ ಶಾಲೆಗಳು ಉಳಿಯುವುದಿಲ್ಲ. ಬಾಲ್ಯದಲ್ಲಿಯೇ ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡುವ ಅಗತ್ಯವಿದೆ ಎಂದರು.
ನಿವೃತ್ತ ಪ್ರಾಂಶುಪಾಲ ಡಾ.ಗಣನಾಥ ಎಕ್ಕಾರು ಮಾತನಾಡಿ, ಮಕ್ಕಳಲ್ಲಿ ಸೃಜನಾತ್ಮಕ ಬೆಳವಣಿಗೆ ಉತ್ತಮ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ನಿಟ್ಟಿನಲ್ಲಿ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ಈ ಕಾರ್ಯ ಅಭಿನಂದನಾರ್ಹ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಿಲ್ಲಾ ಸಹಾಯಕ ನಿರ್ದೇಶಕಿ ಪೂರ್ಣಿಮಾ, ರಾಜ್ಯ ತುಳು ಸಾಹಿತ್ಯ ಅಕಾಡೆಮಿಯ ಸದಸ್ಯ ಡಾ.ಆಕಾಶ್‌ರಾಜ್ ಜೈನ್, ವಾಗ್ಮಿ ಸಂಧ್ಯಾ ಶೆಣೈ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸಮ್ಮೇಳನಾಧ್ಯಕ್ಷೆ ಅದ್ವಿಕಾ ಶೆಟ್ಟಿ, ವಿಶ್ವ ಸಂಸ್ಕೃತಿ ಪ್ರತಿಷ್ಠಾನದ ಗೌರವಾಧ್ಯಕ್ಷ ವಿಶ್ವನಾಥ ಶೆಣೈ, ಉಡುಪಿ ಮಲಬಾರ್ ಗೋಲ್ಡ್ ನ ವ್ಯವಸ್ಥಾಪಕ ಹಫೀಜ್ ರೆಹಮಾನ್, ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿಯ ರಾಜ್ಯಾಧ್ಯಕ್ಷ ಡಾ.ಶೇಖರ್ ಅಜೆಕಾರು, ಉದ್ಯಮಿ ಆರ್.ಜಿ.ಶೆಟ್ಟಿ ಮುಂಬೈ, ನರಸಿಂಹಮೂರ್ತಿ ಮಣಿಪಾಲ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಮ್ಮೇಳನದಲ್ಲಿ ಮಕ್ಕಳ ಪ್ರತಿಭಾ ಪ್ರದರ್ಶನ, ಯಕ್ಷ ನೃತ್ಯ ವೈಭವ, ರೂಪಾ ವಸುಂಧರ ಆಚಾರ್ಯ ಪಡುಬಿದ್ರೆ ಇವರಿಂದ ಏಕವ್ಯಕ್ತಿ ಚಿತ್ರಕಲಾ `ಪುಷ್ಪಾಂಜಲಿ ‘ ಪ್ರದರ್ಶನ, ಡ್ರಾಮಾ ಜೂನಿಯರ್ ಸೀಸನ್ 4 ರ ವಿಜೇತರಿಗೆ ಗೌರಪಾರ್ಪಣೆ ನಡೆಯಿತು.
ಅಶ್ವಿನಿ ಕೊಂಡಾಡಿ ಸ್ವಾಗತಿಸಿದರು. ರೇಶ್ಮಾ ಶೆಟ್ಟಿ ನಿರೂಪಿಸಿದರು.