ಉಡುಪಿ: ಛತ್ರಪತಿ ಶಿವಾಜಿ ಮಹಾರಾಜರು ತಮ್ಮ ಆಡಳಿತ ವ್ಯವಸ್ಥೆಯಲ್ಲಿ ಅಳವಡಿಸಿಕೊಂಡಿದ್ದ
ಕೌಶಲ್ಯಗಳನ್ನು ಇಂದಿನ ಆಡಳಿತ ವ್ಯವಸ್ಥೆಯಲ್ಲಿಯೂ ಬಳಸಿಕೊಳ್ಳುವುದರ ಮೂಲಕ ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಲು ಸಾಧ್ಯವಾಗಲಿದ್ದು ಅವರ ಆಡಳಿತ ಕೌಶಲ್ಯ ಸದಾ ಮಾದರಿಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದರು.
ಅವರು ಭಾನುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಜಿಲ್ಲಾಡಳಿತ ಹಾಗೂ ಕನ್ನಡ ಸಂಸ್ಕೃತಿ
ಇಲಾಖೆ ಉಡುಪಿ ಜಿಲ್ಲೆ ಇವರ ಆಶ್ರಯದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಿವಾಜಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಇತಿಹಾಸದಲ್ಲಿ ಭಾರತದ ಸಂಸ್ಕೃತಿ ರಕ್ಷಣೆಯ ಮಹಾನ್ ಕಾರ್ಯಗಳಲ್ಲಿ ಹೆಸರು ಮಾಡಿದಂತಹ ಧೀಮಂತ ವ್ಯಕಿಗಳಲ್ಲಿ ಛತ್ರಪತಿ ಶಿವಾಜಿ ತಮ್ಮ ಆಡಳಿತದಲ್ಲಿ ಸಮಾಜದಲ್ಲಿದ್ದ ದುರ್ಬಲರಿಗೆ ವಿಶೇಷ ಸೌಲಭ್ಯಗಳನ್ನು ನೀಡಿದ್ದರು ಎಂದರು.
ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಜಿಲ್ಲಾಧ್ಯಕ್ಷ ಪ್ರಕಾಶ್ ರಾವ್ ಕವಡೆ ಮಾತನಾಡಿ, ಯುವಪೀಳಿಗೆಗೆ
ಶಿವಾಜಿ ಮಹಾರಾಜರಂತಹ ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ತಿಳಿಸಿ ಅವರಲ್ಲಿ ರಾಷ್ಟ್ರಾಭಿಮಾನ ಮೂಡಿಸಬೇಕು ಎಂದರು.
ವಿಶೇಷ ಉಪನ್ಯಾಸ ನೀಡಿದ ಕೋಟ ವಿವೇಕ ಪದವಿ ಪೂರ್ವ ಕಾಲೇಜಿನ ಶಿಕ್ಷಕ ಸಂಜೀವ ನಾಯಕ್ ಮಾತನಾಡಿ, ಭರತ ಖಂಡ ಅನಾದಿ ಕಾಲದಿಂದಲೂ ಬಲಿಷ್ಠ ಚಾರಿತ್ರ್ಯವನ್ನು ನೀಡುತ್ತಾ ಬಂದಿದ್ದು, ಸ್ವರಾಜ್ಯದ ರಕ್ಷಣೆಗಾಗಿ ಎಷ್ಟೋ ಮಹಾನ್ ನಾಯಕರು ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿದ್ದಾರೆ. ಅಂತಹ ಮಹಾನ್ ಸಾಧಕರಲ್ಲಿ ಶ್ರೇಷ್ಠರಾದವರು ಛತ್ರಪತಿ ಶಿವಾಜಿ. ಭಾರತದ ಸಂಸ್ಕೃತಿಗೆ ಧಕ್ಕೆಯಾಗುವಂತಹ ಸಂದರ್ಭದಲ್ಲಿ ಅದನ್ನು ತಡೆಯುವಲ್ಲಿ ಮತ್ತು ಧರ್ಮವನ್ನು ಸಂರಕ್ಷಣೆ ಮಾಡುವಲ್ಲಿ ಯಶಸ್ವಿ ನಾಯಕರು ಎಂದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ಗೌರವ ಸಲಹೆಗಾರ ಕೇಶವ ರಾವ್ ಕವಡೆ, ಗೌರವಾಧ್ಯಕ್ಷ ರಮಾನಾಥ್ ಜಿ, ಕಾರ್ಯದರ್ಶಿ ಸಂತೋಷ್ ರಾವ್ ಕವಡೆ, ಸಂಘಟನಾ ಕಾರ್ಯದರ್ಶಿ ಮಧ್ವೇಶ್ ರಾವ್ ಬಹುಮಾನ್, ಮರಾಠ ಸಮುದಾಯದ ಸದಸ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ ,ಛತ್ರಪತಿ ಶಿವಾಜಿ ವಿವಿಧ್ಧೋದೇಶ ಸಹಕಾರ ಸಂಘದ ಅಧ್ಯಕ್ಷ ದಿನೇಶ್ ಸಿ ನಾಯಕ್ ವಂದಿಸಿದರು.