ಕೆಥೊಲಿಕ್ ಸಭಾ ಉಡುಪಿ ಪ್ರದೇಶ್:ಸಮುದಾಯೋತ್ಸವ್-2020 ಆಮಂತ್ರಣ ಪತ್ರಿಕೆ ಬಿಡುಗಡೆ

ಉಡುಪಿ: ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ 2020 ಜನವರಿ 19ರಂದು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಆವರಣದಲ್ಲಿ ಆಯೋಜಿಸಿರುವ ಧರ್ಮಪ್ರಾಂತ್ಯ ಮಟ್ಟದ ಶ್ರೀಸಾಮಾನ್ಯರ ಸಮ್ಮೇಳನ ‘ಸಮುದಾಯೋತ್ಸವ್-2020’ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ  ಗುರುವಾರ ಸಂಘಟನೆಯ ಸಭಾಭವನದಲ್ಲಿ ಜರಗಿತು.

ಆಮಂತ್ರಣ ಪತ್ರಿಕೆಯನ್ನು ಕಲ್ಯಾಣಪುರ ಮೌಂಟ್ ರೋಸರಿ ಚರ್ಚಿನ ಧರ್ಮಗುರು ವಂ. ಡಾ. ಲೆಸ್ಲಿ ಡಿಸೋಜಾ ಬಿಡುಗಡೆಗೊಳಿಸಿದರು.

ಅನಂತರ ಮಾತನಾಡಿದ ಅವರು ಸಮಾಜದಲ್ಲಿ ಸೇವೆ ನೀಡಲು ಅವಕಾಶ ಸಿಕ್ಕಾಗ ಅದನ್ನು ಸದುಪಯೋಗಪಡಿಸಿಕೊಂಡಾಗ ಬದಲಾವಣೆ ತರಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬರಿಗೂ ದೇವರು ಅವರದ್ದೇ ಆದ ಪ್ರತಿಭೆಗಳನ್ನು ನೀಡಿರುತ್ತಾರೆ. ಅವುಗಳನ್ನು ಸದುಪಯೋಗಗೊಳಿಸುವ ಕೆಲಸ ನಡೆಯಬೇಕಾಗಿದ್ದು, ಅದನ್ನು ಸಮುದಾಯೋತ್ಸವದ ಮೂಲಕ ಬೆಳಕಿಗೆ ಬರಲು ಸಹಾಯಕವಾಗಲಿ. ಸಮುದಾಯೋತ್ಸವದ ಮೂಲಕ ಕ್ರೈಸ್ತ ಸಮುದಾಯದ ಶ್ರೀಸಾಮಾನ್ಯರನ್ನು ಒಗ್ಗೂಡಿಸುವ ಮೂಲಕ ಸಮುದಾಯದ ಒಗ್ಗಟ್ಟು- ಸೌಹಾರ್ದತೆ ಮೂಡಿಸಲು ಸಹಕಾರಿಯಾಗಲಿ ಎಂದರು.

ಸಮ್ಮೇಳನದಲ್ಲಿ ಉಡುಪಿ ಧರ್ಮಪ್ರಾಂತ್ಯ ವ್ಯಾಪ್ತಿಯ ಕೆಥೊಲಿಕ್ ಸಮುದಾಯದ ಸುಮಾರು 6000 ಭಾಗವಹಿಸಲಿದ್ದು, 5 ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಿಗೆ, ಹಾಗೂ ಜೀವಮಾನ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಗುವುದು. ಅಲ್ಲದೆ ಉಡುಪಿ ಮೂಲದ ಪ್ರಸ್ತುತ ಜಿಲ್ಲೆಯ ಹೊರಗಿದ್ದು ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕ ಮಕ್ಕಳನ್ನು ಕೂಡ ಗೌರವಿಸಲಾಗುವುದು. ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ಪ್ರಸ್ತುತ ಸ್ಥಿತಿಗತಿಯ ಅವಲೋಕನ ಹಾಗೂ ಭವಿಷ್ಯದ ಯೋಜನೆಯ ಕುರಿತು ವಿಶೇಷ ವಿಚಾರಗೋಷ್ಠಿ ನಡೆಯಲಿದೆ.

ಇದೇ ವೇಳೆ ಕೆಥೊಲಿಕ್ ಸಭಾದ ಅಂಗ ಸಂಸ್ಥೆ ಸಶಕ್ತ ಸಮುದಾಯ ಸೇವಾ ಟ್ರಸ್ಟ್ ಇದರ ವತಿಯಿಂದ ಧರ್ಮಪ್ರಾಂತ್ಯದ ಅರ್ಹ 11 ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಸಹಾಯಧನವನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಭಾರತೀಯ ಕೆಥೊಲಿಕ್ ಯುವ ಸಂಚಾಲನದ ಉಡುಪಿ ಧರ್ಮಪ್ರಾಂತ್ಯದ ಅಧ್ಯಕ್ಷರಾದ ಡಿಯೋನ್ ಡಿಸೋಜಾ, ಕೆಥೊಲಿಕ್ ಸ್ತ್ರೀ ಸಂಘಟನೆ ಅಧ್ಯಕ್ಷರಾದ ಪ್ರಮೀಳಾ ಡೆಸಾ ಸಮಾವೇಶಕ್ಕೆ ಶುಭಹಾರೈಸಿದರು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಅಧ್ಯಕ್ಷರಾದ ಆಲ್ವಿನ್ ಕ್ವಾಡ್ರಸ್, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ, ನಿಕಟಪೂರ್ವ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಸಶಕ್ತ ಸಮುದಾಯ ಸೇವಾ ಟ್ರಸ್ಟ್ ಇದರ  ಅಧ್ಯಕ್ಷ ವಾಲ್ಟರ್ ಸಿರಿಲ್ ಪಿಂಟೊ, ಮಾಜಿ ಅಧ್ಯಕ್ಷ ಆಲ್ಫೋನ್ಸ್ ಡಿಕೋಸ್ತಾ, ಡಾ.ಜೆರಾಲ್ಡ್ ಪಿಂಟೊ ಉಪಸ್ಥಿತರಿದ್ದರು.

ಸಮುದಾಯೋತ್ಸವದಿಂದ ಉಳಿದ ಹಣ ಬಡವರ ಅಗತ್ಯತೆಗೆ

ಸಮುದಾಯೋತ್ಸವ ಕಾರ್ಯಕ್ರಮ ಧರ್ಮಪ್ರಾಂತ್ಯದ ಶ್ರೀಸಾಮಾನ್ಯರನ್ನು ಒಂದೇ ಸೂರಿನಡಿ ಒಟ್ಟಿಗೆ ಸೇರಲು ಒಂದು ಅವಕಾಶವಾದರೆ ಇದಕ್ಕಾಗಿ ಸಂಗ್ರಹವಾಗುವ ಹಣದಿಂದ ಖರ್ಚನ್ನು ತೆಗೆದು ಉಳಿದ ಹಣವನ್ನು ಸಮುದಾಯದಲ್ಲಿ ಕಷ್ಟದಲ್ಲಿರುವವರ ಅಗತ್ಯತೆಗಳಾದ ಶಿಕ್ಷಣ, ಆರೋಗ್ಯ ಮತ್ತು ವಸತಿ ಯೋಜನೆಗಳಿಗೆ ವಿನಿಯೋಗಿಸಲು ನಿರ್ಧರಿಸಲಾಗಿದೆ. ಈ ನಿಟ್ಟಿನಲ್ಲಿ ದೊಡ್ಡ ಮೊತ್ತದ ನಿಧಿಯನ್ನು ಸಂಗ್ರಹಿಸಿ ಶಾಶ್ವತವಾಗಿ ಅಶಕ್ತರಿಗೆ ನೆರವಾಗಲು ನಿರ್ಧರಿಸಲಾಗಿದೆ ಎಂದು ಸಶಕ್ತ ಸಮುದಾಯ ಸೇವಾ ಟ್ರಸ್ಟ್ ಇದರ  ಅಧ್ಯಕ್ಷರಾದ ವಾಲ್ಟರ್ ಸಿರಿಲ್ ಪಿಂಟೊ ಹೇಳಿದರು.

ಆಲ್ವಿನ್ ಕ್ವಾಡ್ರಸ್ ಸ್ವಾಗತಿಸಿ, ಕಾರ್ಯದರ್ಶಿ ಸಂತೋಷ್ ಕರ್ನೆಲಿಯೋ ವಂದಿಸಿದರು.