ಚೆಕ್ ಬೌನ್ಸ್ ಪ್ರಕರಣ: ಖ್ಯಾತ ನಟ ರಾಜ್‌ಪಾಲ್ ಯಾದವ್‌ಗೆ ಸುಪ್ರೀಂ ಕೋರ್ಟ್ ಛೀಮಾರಿ:

ನವದೆಹಲಿ: ದೀರ್ಘಕಾಲದಿಂದ ಬಾಕಿ ಉಳಿದಿರುವ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಅವರಿಗೆ ಸುಪ್ರೀಂ ಕೋರ್ಟ್ ತೀವ್ರ ಛೀಮಾರಿ ಹಾಕಿದೆ. ಖಾಸಗಿ ಸಂಸ್ಥೆಗೆ ಪಾವತಿಸಬೇಕಿದ್ದ ಬಾಕಿ ಮೊತ್ತವನ್ನು ಪಾವತಿಸುವ ಭರವಸೆ ನೀಡಿದ್ದರೂ ಅದನ್ನು ಈಡೇರಿಸದ ಹಿನ್ನೆಲೆಯಲ್ಲಿ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ.

ಸೆಪ್ಟೆಂಬರ್ 15ರಂದು ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್, ಬಾಕಿ ಮೊತ್ತ ಪಾವತಿಸಲು ಸ್ಪಷ್ಟವಾದ ಪ್ರಸ್ತಾವನೆ ಸಲ್ಲಿಸುವಂತೆ ಯಾದವ್ ಅವರಿಗೆ ಎರಡು ವಾರಗಳ ಅಂತಿಮ ಅವಕಾಶ ನೀಡಿತ್ತು. ಅಲ್ಲದೆ, ಸುಪ್ರೀಂ ಕೋರ್ಟ್ ರಿಜಿಸ್ಟ್ರಿಯಲ್ಲಿ ₹2 ಕೋಟಿ ಠೇವಣಿ ಇಡುವಂತೆ ನಿರ್ದೇಶಿಸಿತ್ತು.

ಈ ಪ್ರಕರಣ ಸೋಮವಾರ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಹಾಗೂ ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ ಅವರನ್ನೊಳಗೊಂಡ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಎರಡು ವಾರಗಳ ಗಡುವು ಮುಗಿದಿದ್ದರೂ ಅಕ್ಟೋಬರ್ 5ರವರೆಗೆ ಯಾವುದೇ ಪಾವತಿ ಮಾಡಿಲ್ಲ ಎಂಬುದನ್ನು ಪೀಠ ಗಮನಿಸಿತು.

ಯಾದವ್ ಅವರ ಮೇಲ್ಮನವಿಯನ್ನು ವಜಾಗೊಳಿಸಬಹುದು ಎಂದು ಪೀಠ ಹೇಳಿದರೂ, ಹಾಗೆ ಮಾಡುವುದರಿಂದ ದೂರುದಾರರು ತಮ್ಮ ಹಣವನ್ನು ಮರಳಿ ಪಡೆಯುವ ಸಾಧ್ಯತೆಗಳಿಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ತಕ್ಷಣ ಕ್ರಮ ಕೈಗೊಳ್ಳಲು ಹಿಂಜರಿಯಿತು.

ವಿಚಾರಣೆ ವೇಳೆ ಯಾದವ್ ಪರ ವಕೀಲರು ದೂರುದಾರರು ಬಡವರಲ್ಲ ಎಂದು ಹೇಳಿದ್ದು, ಪೀಠದ ಅಸಮಾಧಾನಕ್ಕೆ ಕಾರಣವಾಯಿತು. ಈ ವೇಳೆ ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರು, ದೂರುದಾರರು ಯಾದವ್‌ಗಿಂತ ಶ್ರೀಮಂತರಾಗಿರಬಹುದು. ಆದರೆ ನಟರು ಅವರನ್ನು ವಂಚಿಸಿದ ಮಟ್ಟಿಗೆ ಅವರು ಬಡವರು ಎಂದು ಕಟುವಾಗಿ ಪ್ರತಿಕ್ರಿಯಿಸಿದರು.

ಅಲ್ಲದೆ, ಈ ರೀತಿಯ ದುರಹಂಕಾರವನ್ನು ಅದರ ಸರಿಯಾದ ಸ್ಥಾನದಲ್ಲಿ ಇಡಬೇಕಾಗಿದೆ. ಯಾವ ಸಂದರ್ಭದಲ್ಲಿ ಏನು ಮಾತನಾಡಬೇಕು ಎಂಬುದನ್ನು ತಿಳಿದುಕೊಳ್ಳಬೇಕು ಎಂದು ನ್ಯಾಯಮೂರ್ತಿ ಬಾಗ್ಚಿ ಎಚ್ಚರಿಕೆ ನೀಡಿದರು. ಪ್ರಕರಣದ ಗಂಭೀರತೆಯನ್ನು ಉಲ್ಲೇಖಿಸಿದ ಪೀಠ, ರಾಜ್‌ಪಾಲ್ ಯಾದವ್ ಅವರ ಸ್ಥಾನ ಜೈಲಿನಲ್ಲಿದೆ ಎಂಬುದಾಗಿ ಕಠಿಣವಾಗಿ ಹೇಳಿದೆ.