ಐದನೇ ಬಾರಿಗೆ ಐಪಿಎಲ್ ಕಪ್ ಎತ್ತಿದ ಚೆನ್ನೈ ಸೂಪರ್ ಕಿಂಗ್ಸ್: ರವೀಂದ್ರಾ ಜಡೇಜಾ ರೋಚಕ ಬ್ಯಾಟಿಂಗ್ ನಿಂದ ಸಿ.ಎಸ್.ಕೆ ಗೆ ಒಲಿದ ವಿಜಯಮಾಲೆ!

ಅಹಮದಾಬಾದ್: ಗುಜರಾತ್ ಟೈಟಾನ್ಸ್ ವಿರುದ್ಧ ರೋಚಕ ಫೈನಲ್‌ನಲ್ಲಿ ಚೆನ್ನೈ ಸುಪರ್ ಕಿಂಗ್ಸ್ ನ ರವೀಂದ್ರ ಜಡೇಜಾ ಅವರ ಐತಿಹಾಸಿಕ ಪ್ರದರ್ಶನದ ಬಳಿಕ ತಂಡವು ಐದನೇ ಬಾರಿಗೆ ಕಪ್ ಎತ್ತಿ ಬೀಗಿದೆ. ಮುಂಬೈ ಇಂಡಿಯನ್ಸ್ ನಂತರ 5 ಐಪಿಎಲ್ ಪ್ರಶಸ್ತಿಗಳನ್ನು ಗೆದ್ದ ಎರಡನೇ ತಂಡವಾಗಿದೆ. ಜಡೇಜಾ ಕೊನೆಯ ಎರಡು ಎಸೆತಗಳಲ್ಲಿ ಒಂದು ಸಿಕ್ಸರ್ ಮತ್ತು ಬೌಂಡರಿಗಳನ್ನು ಹೊಡೆದು ಈ ಐತಿಹಾಸಿಕ ಗೆಲುವು ದಾಖಲಿಸಿದರು.

Image

ಅಹಮದಾಬಾದಿನ ನರೇಂದ್ರ ಮೋದಿ ಸ್ಟೇಡಿಯಂ ನಲ್ಲಿ ನಡೆದ 2023 ರ ಇಂಡಿಯನ್ ಪ್ರೀಮಿಯರ್ ಲೀಗ್‌ನ ಅಂತಿಮ ಪಂದ್ಯವನ್ನು ಮಳೆಯಿಂದಾಗಿ ಮೊಟಕುಗೊಳಿಸಲಾಯಿತು. ಡಕ್ ವರ್ಥ್ ಲೂಯಿಸ್ ನಿಯಮದ ಪ್ರಕಾರ ಚೆನ್ನೈ ತಂಡವು ಗುಜರಾತ್ ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿತು.

ಗುಜರಾತ್ ಟೈಟನ್ಸ್ ಇದುವರೆಗಿನ ಸಾರ್ವಾಧಿಕ 214/4 (20.0) ಸ್ಕೋರ್ ಅನ್ನು ಗಳಿಸಿತ್ತು. ಮೀಸಲು ದಿನದಲ್ಲಿ ಚೆನ್ನೈ ಸುಪರ್ ಕಿಂಗ್ಸ್ 171/5 (15.0) ಗಳಿಸಿ ಕಪ್ ತನ್ನದಾಗಿಸಿತು.

ಅಂತಿಮ ಓವರ್‌ನಲ್ಲಿ ಸಿ.ಎಸ್.ಕೆ ಗೆ 13 ರನ್‌ಗಳ ಅಗತ್ಯವಿತ್ತು. ಋತುವಿನ ಉದ್ದಕ್ಕೂ ಟೈಟಾನ್ಸ್‌ನ ಮೋಹಿತ್ ಶರ್ಮಾ, ಅಂಬಟಿ ರಾಯುಡು ಮತ್ತು ಎಂಎಸ್ ಧೋನಿ ಅವರ ವಿಕೆಟ್‌ಗಳೊಂದಿಗೆ ಸೂಪರ್ ಕಿಂಗ್ಸ್ ಚೇಸ್ ಅನ್ನು ಓಟವನ್ನು ತಡೆಯಲು ಪ್ರಯತ್ನಿಸಿದರಾದರೂ ಶಾಂತವಾಗಿದ್ದ ರವೀಂದ್ರ ಜಡೇಜಾ ಪ್ರಮುಖ ಶಾಟ್ ಗಳನ್ನು ಹೊಡೆದು ಮ್ಯಾಚಿನ ದಿಕ್ಕನ್ನೇ ಬದಲಾಯಿಸಿದರು.

Image

ಚೆನ್ನೈ ಸೂಪರ್ ಕಿಂಗ್ಸ್ ಇದೀಗ ಐದು ಐಪಿಎಲ್ ಪ್ರಶಸ್ತಿಗಳ ಮುಂಬೈ ಇಂಡಿಯನ್ಸ್ ದಾಖಲೆಯನ್ನು ಸರಿಗಟ್ಟಿದೆ. ತಮ್ಮ 10 ನೇ ಐಪಿಎಲ್ ಫೈನಲ್‌ನಲ್ಲಿ ಮುನ್ನಡೆ ಸಾಧಿಸಿದ ಎಂಎಸ್ ಧೋನಿ, ರೋಹಿತ್ ಶರ್ಮಾ ಅವರೊಂದಿಗೆ ಸಮಬಲ ಸಾಧಿಸಿದ್ದಾರೆ. ಇಬ್ಬರೂ ನಾಯಕರಾಗಿ ಈಗ ಐದು ಐಪಿಎಲ್ ಪ್ರಶಸ್ತಿಗಳನ್ನು ಹೊಂದಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ 2010 ರಲ್ಲಿ ತಮ್ಮ ಮೊದಲ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.ನಂತರ 2011 ರಲ್ಲಿ ಗೆಲುವನ್ನು ಪುನರಾವರ್ತಿಸಿತು. 2016 ಮತ್ತು 2017 ರಲ್ಲಿ ಎರಡು ವರ್ಷಗಳ ಕಾಲ ಅಮಾನತಿನಲ್ಲಿದ್ದ ಬಳಿಕ 2018 ರಲ್ಲಿ ತಮ್ಮ ಮೂರನೇ ಪ್ರಶಸ್ತಿಯನ್ನು ಗೆದ್ದರು. 2020 ರಲ್ಲಿ ಸಾಧನೆ ಶೂನ್ಯವಾದರೂ 2021 ರಲ್ಲಿ ನಾಲ್ಕನೇ ಪ್ರಶಸ್ತಿಯನ್ನು ಗೆದ್ದಿತು. 2022 ರಲ್ಲಿ ಮತ್ತೆ ಶೂನ್ಯ ಸಾಧನೆ ಮಾಡಿದ್ದ ಸೂಪರ್ ಕಿಂಗ್ಸ್ ತಮ್ಮ ಐದನೇ ಐಪಿಎಲ್ ಕಿರೀಟದೊಂದಿಗೆ 2023 ರಲ್ಲಿ ಇತಿಹಾಸವನ್ನು ಸೃಷ್ಟಿಸಿತು.