ಮಾರುಕಟ್ಟೆ ಆಳುತ್ತಿದೆ ಕೆಮಿಕಲ್ ಮಿಶ್ರಿತ ಮಾವಿನಹಣ್ಣು: ಕೃತಕ ಬಣ್ಣದ ಮಾವಿನ ಮೇಲೆ ಕೇಂದ್ರ ಆಹಾರ ಇಲಾಖೆ ಹದ್ದಿನ ಕಣ್ಣು

ನವದೆಹಲಿ: Food Safety and Standards Authority of India (FSSAI) ದೇಶದ ಎಲ್ಲಾ ರಾಜ್ಯಗಳಿಗೆ ತುರ್ತು ಎಚ್ಚರಿಕೆ ನೀಡಿದ್ದು, ಹಣ್ಣುಗಳನ್ನು ಮಾಗಿಸಲು ನಿಷೇಧಿತ ಹಾಗೂ ಅಪಾಯಕಾರಿ ರಾಸಾಯನಿಕಗಳ ಬಳಕೆ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದೆ.

ರಾಜ್ಯಗಳ ಆಹಾರ ಆಯುಕ್ತರಿಗೆ ಕಳುಹಿಸಿರುವ ಪತ್ರದಲ್ಲಿ, ಹಣ್ಣು ಮಾರುಕಟ್ಟೆಗಳು ಮತ್ತು ಮಾಗಿಸುವ ಗೋದಾಮುಗಳ ಮೇಲೆ ಕಡ್ಡಾಯವಾಗಿ ಕಟ್ಟುನಿಟ್ಟಿನ ಪರಿಶೀಲನೆ ನಡೆಸುವಂತೆ ಸೂಚಿಸಲಾಗಿದೆ. ವಿಶೇಷವಾಗಿ ಕ್ಯಾಲ್ಸಿಯಮ್ ಕಾರ್ಬೈಡ್ ಬಳಕೆ ಪ್ರಕರಣಗಳು ಹೆಚ್ಚುತ್ತಿರುವುದು ಗಮನಕ್ಕೆ ಬಂದಿದ್ದು, ಮಾವು, ಬಾಳೆ, ಪಪ್ಪಾಯ ಹಣ್ಣುಗಳನ್ನು ಬೇಗ ಮಾಗಿಸಲು ವ್ಯಾಪಾರಿಗಳು ಇದನ್ನು ಅಕ್ರಮವಾಗಿ ಬಳಸುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಈ ರೀತಿಯ ರಾಸಾಯನಿಕ ಬಳಕೆಯಿಂದ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಗಂಟಲು ನೋವು, ವಾಂತಿ, ಚರ್ಮದ ಅಲರ್ಜಿ ಸೇರಿದಂತೆ ದೀರ್ಘಕಾಲಿಕವಾಗಿ ಕ್ಯಾನ್ಸರ್ ಅಪಾಯವೂ ಎದುರಾಗಬಹುದು ಎಂದು ಎಚ್ಚರಿಕೆ ನೀಡಲಾಗಿದೆ.

ಇದರ ಜೊತೆಗೆ, ಇಥಿಫೋನ್ ದ್ರಾವಣ ಬಳಸಿ ಹಣ್ಣುಗಳನ್ನು ಕೃತಕವಾಗಿ ಮಾಗಿಸುವ ಪ್ರಕ್ರಿಯೆಯೂ ಕಂಡುಬಂದಿದ್ದು, ಇದಕ್ಕೂ ತೀವ್ರ ನಿಗಾವಹಿಸಲು ಸೂಚಿಸಲಾಗಿದೆ. ಸುರಕ್ಷಿತ ವಿಧಾನವಾಗಿ ಇಥಿಲಿನ್ ಅನಿಲ ಬಳಕೆಯನ್ನು ಮಾತ್ರ ಅನುಸರಿಸುವಂತೆ ವ್ಯಾಪಾರಿಗಳಿಗೆ ಮಾರ್ಗದರ್ಶನ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಹಣ್ಣುಗಳ ಮೇಲೆ ಮೇಣ ಮತ್ತು ಸಿಂಥೆಟಿಕ್ ಬಣ್ಣ ಬಳಕೆಯ ಮೇಲೂ ಕಣ್ಣಿಟ್ಟಿರಲು ಹೇಳಿರುವ FSSAI, ಗೋದಾಮುಗಳು ಮತ್ತು ಹೋಲ್‌ಸೇಲ್ ಮಾರುಕಟ್ಟೆಗಳಲ್ಲಿ ಸ್ಟ್ರಿಪ್ ಪೇಪರ್ ಟೆಸ್ಟ್ ಮೂಲಕ ಕ್ಯಾಲ್ಸಿಯಮ್ ಕಾರ್ಬೈಡ್ ಪತ್ತೆಹಚ್ಚುವಂತೆ ಸೂಚಿಸಿದೆ.

ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ, ಅಗತ್ಯವಿದ್ದರೆ ಗೋದಾಮುಗಳು ಹಾಗೂ ಹಣ್ಣು ಮಳಿಗೆಗಳನ್ನು ಸೀಜ್ ಮಾಡುವಂತೆ ಆದೇಶಿಸಿದೆ.

ಆರೋಗ್ಯವನ್ನು ವೃದ್ಧಿಸಬೇಕಾದ ಹಣ್ಣುಗಳೇ ಅಪಾಯಕಾರಿ ರಾಸಾಯನಿಕಗಳಿಂದ ಹಾನಿಕಾರಕವಾಗುತ್ತಿರುವುದು ಗಂಭೀರ ಸಮಸ್ಯೆಯಾಗಿದೆ ಎಂದು FSSAI ತಿಳಿಸಿದೆ.