ಐದು ಸಾವಿರಕ್ಕೂ ಅಧಿಕ ಜನರ ತಪಾಸಣೆ : ಬೆಂಗಳೂರಿನ ಹಲವೆಡೆ ಪೊಲೀಸರ ವಿಶೇಷ ಕಾರ್ಯಾಚರಣೆ

ಬೆಂಗಳೂರು:ಇತ್ತೀಚಿನ ದಿನಗಳಲ್ಲಿ ನಗರದ ವೈನ್ ಶಾಪ್​, ಬಾರ್ ಆಯಂಡ್ ರೆಸ್ಟೊರೆಂಟ್, ಡಾಬಾ, ಲಾಡ್ಜ್, ಪಬ್, ಬೇಕರಿ / ಟೀ ಶಾಪ್​ಗಳ ಬಳಿ ಅಪರಾಧ ಹಿನ್ನೆಲೆಯುಳ್ಳವರ ಚಟುವಟಿಕೆಗಳು, ಗಲಾಟೆ, ಸುಲಿಗೆ ಮುಂತಾದವು ಹೆಚ್ಚುತ್ತಿರುವುದನ್ನು ನಿಯಂತ್ರಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು. ಕಾರ್ಯಾಚರಣೆ ಸಂದರ್ಭದಲ್ಲಿ 577 ವೈನ್ ಶಾಪ್ಸ್​, 969 ಬಾರ್ ಆಯಂಡ್ ರೆಸ್ಟೋರೆಂಟ್, 704 ಲಾಡ್ಜ್​ಗಳು, 1,682 ಬೇಕರಿ, ಪಾನ್ ಶಾಪ್​ಗಳ, 715 ಇತರೆ ಜನನಿಬಿಡ ಸ್ಥಳಗಳ ಬಳಿ ಸುಮಾರು 5 ಸಾವಿರಕ್ಕೂ ಅಧಿಕ ಜನರನ್ನು ಹಾಗೂ 4 ಸಾವಿರಕ್ಕೂ ಅಧಿಕ ವಾಹನಗಳನ್ನು ತಪಾಸಣೆ ನಡೆಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಡಿಸೆಂಬರ್ 3 ರಂದು ರಾತ್ರಿ ಬೆಂಗಳೂರಿನ ವಿವಿಧೆಡೆ ಏಕಕಾಲದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದ್ದು, ವಿವಿಧ ಐಪಿಸಿ ಕಾಯ್ದೆಗಳಡಿ 5, ಕರ್ನಾಟಕ ಪೊಲೀಸ್ ಕಾಯ್ದೆಯಡಿ 1007, ಹಾಗೂ ಸಿಗರೇಟು ಮತ್ತಿತರ ತಂಬಾಕು ಉತ್ಪನ್ನಗಳ ಕಾಯ್ದೆಯಡಿ 2,425 ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಬಗ್ಗೆ ನಗರ ಪೊಲೀಸ್​ ಆಯುಕ್ತರು ಮಾಹಿತಿ ನೀಡಿದ್ದಾರೆ. ನಗರದ ಹಲವೆಡೆ ವೈನ್ ಶಾಪ್, ಬಾರ್ ಆಯಂಡ್ ರೆಸ್ಟೋರೆಂಟ್, ಲಾಡ್ಜ್​ಗಳ ಬಳಿ ಅಪರಾಧ ಚಟುವಟಿಕೆಗಳು ಹೆಚ್ಚುತ್ತಿರುವುದರ ವಿರುದ್ಧ ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡು ವಿವಿಧ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.