ಪುದುಚೇರಿ: ಕೊರೊನಾ ಪರೀಕ್ಷಾ ಕೇಂದ್ರಗಳಿಗೆ ಬರುವಂತೆ ಜನರನ್ನು ಆಕರ್ಷಿಸುವ ಸಲುವಾಗಿ ಸಂಬಂಧಪಟ್ಟ ಅಧಿಕಾರಿಗಳು ಹಲವು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಆದರೆ ಪುದುಚೇರಿಯ ಎಐಎಡಿಎಂಕೆ ಶಾಸಕರೊಬ್ಬರು ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ಕೊರೊನಾ ಪರೀಕ್ಷೆಗೆ ಒಳಪಡುವ ಜನರಿಗೆ ಅಕ್ಕಿ ವಿತರಿಸಲು ಮುಂದಾಗಿದ್ದಾರೆ.
ಎಐಎಡಿಎಂಕೆ ಶಾಸಕ ಅನ್ಬಗಳನ್ ತಮ್ಮ ಸ್ವಕ್ಷೇತ್ರದಲ್ಲಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ಉಚಿತವಾಗಿ 5 ಕೆಜಿ ಅಕ್ಕಿ ನೀಡುತ್ತಿದ್ದಾರೆ.
ಪುದುಚೆರಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪುದುಚೆರಿ ಜಿಲ್ಲಾಡಳಿತ ಐಸಿಎಂಆರ್ ಆದೇಶದಂತೆ ಪರೀಕ್ಷೆ ನಡೆಸಲು ಮುಂದಾಗಿದೆ. ಆದರೆ ಪರೀಕ್ಷೆ ಮಾಡಿಸಿಕೊಳ್ಳಲು ಬರುವವರ ಸಂಖ್ಯೆ ಕಡಿಮೆಯಿತ್ತು. ಆ ಕಾರಣದಿಂದ ಪರೀಕ್ಷೆ ನಡೆಸಿಕೊಳ್ಳುವವರನ್ನು ಆಕರ್ಷಿಸಲು ಈ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.
ಶಾಸಕ ಅನ್ಬಗಳನ್ ತಮ್ಮ ಸ್ವಂತ ಹಣದಿಂದ ಅಕ್ಕಿ ಸಂಗ್ರಹಿಸಿ ಐದು ಕಿಲೋ ಚೀಲಗಳಲ್ಲಿ ತುಂಬಿಸಿ ಪರೀಕ್ಷೆ ಮಾಡಿಸಿಕೊಳ್ಳುವವರಿಗೆ ನೀಡುತ್ತಿದ್ದಾರೆ. ಈ ತಂತ್ರವು ಕೆಲಸ ಮಾಡಿದೆ. ಸುಮಾರು 200 ಜನರು ಪರೀಕ್ಷೆಗಳಿಗೆ ಹಾಜರಾಗಿದ್ದರು ಮತ್ತು ಪ್ರತಿಯೊಬ್ಬರೂ ಅಕ್ಕಿ ಚೀಲದೊಂದಿಗೆ ಮನೆಗೆ ತೆರಳಿದ್ದಾರೆ.
ಮುಂದಿನ ದಿನಗಳಲ್ಲಿ ಇದೇ ಕ್ರಮವನ್ನು ಮುಂದುವರಿಸಿಕೊಂಡು ಹೋಗುವುದಾಗಿ ತಿಳಿಸಿದ್ದಾರೆ. ಇದರಿಂದ ಸುಮಾರು 200 ಮಂದಿ ಕೊರೋನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ, ಅದರಲ್ಲಿ 18 ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ ತಿಳಿದುಬಂದಿದೆ.