ಉಡುಪಿ: ದಲಿತ ಸಮುದಾಯವನ್ನು ಕೇವಲ ವೋಟ್ ಬ್ಯಾಂಕ್ಗೆ ಮಾತ್ರ ಬಳಸಿಕೊಂಡಿರುವ ಕಾಂಗ್ರೆಸ್ ಇಂದು ತನ್ನದೇ ಮೋಸ ಜಾಲದಿಂದ ನಾಶಗೊಳ್ಳುತ್ತಿದೆ. ಬಹುಕಾಲದಿಂದ ಶೋಷಣೆ, ದೌರ್ಜನ್ಯಕ್ಕೊಳಗಾಗಿರುವ ಪರಿಶಿಷ್ಟ ಜಾತಿ ಸಮುದಾಯಕ್ಕೆ ಕಾಂಗ್ರೆಸ್ನಿಂದ ಅನ್ಯಾಯವಾಗಿದೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾದ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಹೇಳಿದರು.
ಉಡುಪಿ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬಿಜೆಪಿಯಿಂದ ಮಾತ್ರ ಎಲ್ಲ ವರ್ಗಗಳ ಅಭಿವೃದ್ಧಿ ಸಾಧ್ಯ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ದಲಿತ ಸಮುದಾಯದ ಶ್ರೇಯೋಭಿವೃದ್ಧಿಗೆ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದೆ ಎಂದರು.
ಕಾಂಗ್ರೆಸ್ನ ಮೋಸ ಮತ್ತು ಬಿಜೆಪಿಯ ಅಭಿವೃದ್ಧಿ ಚಿಂತನೆಗಳ ಬಗ್ಗೆ ಸಮುದಾಯದಲ್ಲಿ ಜಾಗೃತಿ ಮೂಡಿಸಿ ಇನ್ನಷ್ಟು ದಲಿತ ಬಂಧುಗಳನ್ನು ಬಿಜೆಪಿ ಕಡೆಗೆ ಕರೆತರಬೇಕಾಗಿದೆ. ಸಂವಿಧಾನಾತ್ಮಕವಾಗಿ ದೊರೆತಿರುವ ಮೀಸಲಾತಿಯ ಸದ್ಬಳಕೆಯಿಂದ ಸಮಾಜ ಮತ್ತು ದೇಶ ಕಟ್ಟುವ ಕೆಲಸದಲ್ಲಿ ಎಲ್ಲರೂ ಕೈಜೋಡಿಸಬೇಕು ಎಂದರು.
ಬಿಜೆಪಿ ಜಿಲ್ಲಾ ಎಸ್.ಸಿ. ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಹೇಮಂತ್ ಕುಮಾರ್ ನೂತನ ಅಧ್ಯಕ್ಷ ಗೋಪಾಲ ಕಳಂಜಿ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರವನ್ನು ಹಸ್ತಾಂತರಿಸಿದರು.
ಎಸ್.ಸಿ. ಮೋರ್ಚಾ ರಾಜ್ಯಾಧ್ಯಕ್ಷ ಚಲವಾದಿ ನಾರಾಯಣ ಸ್ವಾಮಿ ಅವರನ್ನು ಜಿಲ್ಲಾ ಘಟಕದ ಪರವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಸನ್ಮಾನಿಸಿದರು.
ಎಸ್.ಸಿ. ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು, ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಎಸ್.ಸಿ. ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಕಳಂಜಿ ಅವರನ್ನು ಜಿಲ್ಲಾ ಎಸ್.ಸಿ. ಮೋರ್ಚಾ ವತಿಯಿಂದ ಸನ್ಮಾನಿಸಲಾಯಿತು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಶಾಸಕರಾದ ಕೆ.ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್, ಬಿ.ಎಂ. ಸುಕುಮಾರ ಶೆಟ್ಟಿ, ಜಿ.ಪಂ. ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುತ್ಯಾರು ನವೀನ್ ಶೆಟ್ಟಿ, ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಸೇಸು ಎರ್ಮಾಳು, ಮಹಿಳಾ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿಲ್ಪಾ ಜಿ.ಸುವರ್ಣ, ಉಡುಪಿ ತಾ.ಪಂ. ನಿಕಟಪೂರ್ವ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಎಸ್.ಸಿ. ಮೋರ್ಚಾ ನಿಕಟಪೂರ್ವ ರಾಜ್ಯ ಕಾರ್ಯಕಾರಿಣಿ ಸದಸ್ಯ ವಾಸುದೇವ ಬನ್ನಂಜೆ ಉಪಸ್ಥಿತರಿದ್ದರು.
ಬಿಜೆಪಿ ಎಸ್.ಸಿ. ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಕೈಪುಂಜಾಲು ಸ್ವಾಗತಿಸಿದರು. ಎಸ್.ಸಿ. ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೃಷ್ಣಮೂರ್ತಿ ಡಿ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.