ಮಂಗಳೂರು: ಸಿಎಚ್‌ಡಿ ಗ್ರೂಪ್ ನಿಂದ ಯುಎಇಯ ಸಿಒಪಿ 28 ಸಭೆಯಲ್ಲಿ ಜಾಗತಿಕ ನಿಯೋಗದ ಮುನ್ನಡೆಸುವಿಕೆ ಯುನೈಟೆಡ್ ಅರಬ್‌ಎಮಿರೇಟ್ಸ್ನಲ್ಲಿ ಯುಎನ್‌ಎಫ್‌ಸಿಸಿಯ ಸಿಒಪಿ 28 ಸಭೆಯಲ್ಲಿ ಮಂಗಳೂರು ಪ್ರಧಾನ ಕಚೇರಿಯ ಜಾಗತಿಕ ಆರೋಗ್ಯ ಸಂಸ್ಥೆಯಾದ ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ನಿಯೋಗವನ್ನು ಮುನ್ನಡೆಸಲಿದೆ. ಸಿಒಪಿ 28 ಸಭೆಯು 2023, ನವೆಂಬರ್ 30 ರಿಂದ ಡಿಸೆಂಬರ್ 12ರವರೆಗೆ ಜರುಗಲಿದೆ.
ಸಿಎಚ್‌ಡಿ ಗ್ರೂಪ್ ಸಂಸ್ಥೆಯು ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತುಇರಾನ್‌ನಿಂದ 7 ಸದಸ್ಯರನ್ನೊಳಗೊಂಡ ತಜ್ಞರ ನಿಯೋಗವನ್ನು ಮುನ್ನಡೆಸುತ್ತದೆ. ಹಾಗೂ, ಹವಾಮಾನ ಬದಲಾವಣೆಯ ಸಾರ್ವಜನಿಕ ಆರೋಗ್ಯ ಪರಿಣಾಮಗಳು, ಶಕ್ತಿ ಪರಿವರ್ತನೆ, ಜೈವಿಕ ಇಂಧನ ಕಡಿತ ಮತ್ತು ಆಹಾರ ಸುರಕ್ಷತೆಯ ಕಾಳಜಿಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ವಿಶ್ವದಾದ್ಯಂತ ವಿವಿಧ ಪಾಲುದಾರರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುತ್ತದೆ. ಯುಎನ್‌ಎಫ್‌ಸಿಸಿ ಮತ್ತು ಸಿಒಪಿ ಸಭೆಗಳ ಇತಿಹಾಸದಲ್ಲಿ ಸಿಒಪಿ 28 ಮೊದಲ ಬಾರಿಗೆ ಆರೋಗ್ಯವನ್ನು ಕಾರ್ಯಸೂಚಿಯಾಗಿ ಚರ್ಚಿಸಲಾಗುತ್ತಿದೆ ಮತ್ತು ಮಂಡಿಸಲಾಗುತ್ತಿದೆ.
ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಜೊತೆ ಜೊತೆಗೆ ಕ್ಲೈಮೇಟ್ ಆಕ್ಷನ್ ನೆಟ್‌ವರ್ಕ್ – ಸೌತ್ ಏಷ್ಯಾದೊಂದಿಗೆ ಜಂಟಿಯಾಗಿ ಸಭೆಯನ್ನು ನಡೆಸಲಿದ್ದು, ಇದು ದಕ್ಷಿಣ ಏಷ್ಯಾದಲ್ಲಿ ಶಕ್ತಿಯ ಪರಿವರ್ತನೆಯತ್ತ ಗಮನ ಹರಿಸಲಿದೆ.
ಸಿಎಚ್‌ಡಿ ಗ್ರೂಪ್ ಸ್ಥಾಪಕ ಮತ್ತು ಸಿಇಒ ಆಗಿರುವ ಡಾ. ಎಡ್ಮಂಡ್ ಫೆರ್ನಾಂಡಿಸ್ ಅವರು ವಿಶ್ವಸಂಸ್ಥೆಯ ಫೌಂಡೇಶನ್ ವೇದಿಕೆಯಲ್ಲಿಇಂಗಾಲ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸಮಾನ ಆಹಾರ ವಿತರಣೆಯನ್ನು ಉತ್ತೇಜಿಸುವ ಕುರಿತು ಮಾತನಾಡಲಿದ್ದಾರೆ, ಜೊತೆಗೆ ಆಹಾರ ವ್ಯವಸ್ಥೆಗಳು, ಸಾರ್ವಜನಿಕ ಪೋಷಣೆಯ ಹವಾಮಾನ ಸಂವೇದನೆ ಕುರಿತು ಮತ್ತು ಯುದ್ಧವು ಆಹಾರ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಮುಂತಾದುವುಗಳ ಬಗ್ಗೆ ಉಕ್ರೇನ್ ರಾಷ್ಟ್ರದ ವೇದಿಕೆಯಲ್ಲಿ ಅವರು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ.ಫೆರ್ನಾಂಡಿಸ್ ಅವರು ಹಲವಾರು ಪ್ರಮುಖ ವಿಶ್ವ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಡಾ. ಎಡ್ಮಂಡ್ ಫೆರ್ನಾಂಡಿಸ್ ಈ ಹಿಂದೆ ಯುಎನ್‌ಎಫ್‌ಸಿಸಿಯನ್ನು ಹವಾಮಾನ ಸುರಕ್ಷಿತ ಭವಿಷ್ಯಕ್ಕಾಗಿ ಎಲ್ಲಾ ನೀತಿಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಮುಖ್ಯವಾಹಿನಿಗೆ ತರಲು ಒತ್ತಾಯಿಸಿದ್ದರು. ಸಿಒಪಿ 28 ನಲ್ಲಿ ಅವರು ಆಹಾರದ ಭವಿಷ್ಯದ ಕುರಿತಾದ ಜಾಗತಿಕ ಒಕ್ಕೂಟದ ಸಮೂಹದ ಭಾಗವಾಗಿದ್ದಾರೆ.