ಉಡುಪಿ: ಜನರ ಅಂದ ಚೆಂದದ ಛಾಯಾಚಿತ್ರಗಳನ್ನು ತಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರೆಹಿಡಿದು ನೆನಪುಗಳನ್ನು ಶಾಶ್ವತವಾಗಿಸುವ ಛಾಯಾಗ್ರಾಹಕರು ಹೊಸ ಅಭಿಯಾನವೊಂದನ್ನು ಹುಟ್ಟು ಹಾಕಿದ್ದು, ಇದಕ್ಕೆ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ಪ್ರಾಪ್ತವಾಗಿದೆ. ಮನೆ ಕಚೇರಿಗಳಲ್ಲಿ ಹಲವಾರು ವರ್ಷಗಳವರೆಗೆ ಪೂಜಿಸಲ್ಪಟ್ಟು ವಿರೂಪವಾಗಿ ಎಸೆದಿರುವಂತಹ ದೇವರ ಚಿತ್ರಗಳನ್ನು ವಿಶಿಷ್ಟ ರೀತಿಯಲ್ಲಿ ವಿಲೇವಾರಿ ಮಾಡಿ ಜನರಿಂದ ಪ್ರಶಂಸೆ ಪಡೆಯುತ್ತಿದ್ದಾರೆ.
ಸಾರ್ವಜನಿಕರು ಒಂದು ಕಾಲದಲ್ಲಿ ಪೂಜಿಸಿ ಆರಾಧಿಸಿ ಇನ್ನು ಬೆಡವೆಂದು ಎಸೆದ ದೇವರ ಹಳೆಯ ಫೋಟೋಗಳು, ಒಡೆದ ಗ್ಲಾಸಿನ ಫ್ರೇಮ್ ಗಳು, ಭಿನ್ನವಾದ ಮೂರ್ತಿಗಳು, ತುಕ್ಕು ಹಿಡಿದ ಹಳೆಯ ಸ್ಮರಣಿಕೆಗಳು, ದೇವರ ಚಿತ್ರವಿರುವ ಆಮಂತ್ರಣ ಪತ್ರಿಕೆಗಳನ್ನು ವಿಶೇಷ ರೀತಿಯಲ್ಲಿ ವಿಲೇವಾರಿ ಮಾಡುವ ಅಭಿಯಾನಕ್ಕೆ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಉಡುಪಿ ವಲಯದ ವೃತ್ತಿ ನಿರತ ಛಾಯಾಗ್ರಾಹಕರು ಕೈ ಹಾಕಿದ್ದಾರೆ.
ದೇವರ ಆಶೀರ್ವಾದ ಬೇಕೆನ್ನುವ ನಿಟ್ಟಿನಲ್ಲಿ ಮನೆಯ ತುಂಬಾ ದೇವರ ಫೋಟೋಗಳನ್ನು ತುಂಬಿ ಮುಂದೊಂದು ದಿನ ಅವುಗಳನ್ನು ವಿಲೇವಾರಿ ಮಾಡುವ ಸಮಸ್ಯೆ ಎದುರಾಗಿ, ಫೋಟೋಗಳ ವಿಲೇವಾರಿ ಮಾಡಲು ಸರಿಯಾದ ಮಾರ್ಗದರ್ಶನವಿಲ್ಲದೆ, ಜನರ ಓಡಾಟ ವಿರಳವಿರುವ ಕಡೆಗಳಲ್ಲಿ ಅಥವಾ ಅಶ್ವತ ಕಟ್ಟೆ, ಗೋಳಿ ಮರದ ಬುಡದಲ್ಲಿಟ್ಟು ಬರುವ ಪರಿಪಾಠವಿದೆ. ಒಂದು ಕಾಲದಲ್ಲಿ ವೈಭವದಿಂದ ಪೂಜಿಸಲ್ಪಟ್ಟ ದೇವರುಗಳು ಅನಾಥ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡು ಧರ್ಮ ಪ್ರಜ್ಞೆಯಿಂದ ಜಾಗೃತರಾದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಛಾಯಾಗ್ರಾಹಕರು ಈ ದೇವರ ಚಿತ್ರಗಳಿಗೆ ಗೌರವಯುತವಾದ ವಿದಾಯವನ್ನು ನೀಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
ಛಾಯಾಗ್ರಾಹಕರು ಹಳೇ ಫೋಟೋ ಫ್ರೇಮ್ ಗಳು, ಸ್ಮರಣಿಕೆಗಳು, ದೇವರ ಫೋಟೋಗಳನ್ನು ಎಸೆದ ಕಟ್ಟೆಗಳನ್ನು ಗುರುತಿಸಿ ಅಲ್ಲಿರುವ ಎಲ್ಲ ತ್ಯಾಜ್ಯಗಳನ್ನು ಒಟ್ಟು ಸೇರಿಸಿ ನಂತರ ಆ ಫೋಟೋ ಫ್ರೇಮ್ ಗಳ ಫೋಟೋವನ್ನು ಬೇರ್ಪಡಿಸಿ ಫ್ರೇಮ್ಗಳ ಮರಗಳನ್ನು ಪ್ರತ್ಯೇಕಿಸಿ ಒಡೆದ ಗ್ಲಾಸ್ ಗಳನ್ನು ಜಾಗರೂಕತೆಯಿಂದ ಇನ್ನೊಂದು ಚೀಲಕ್ಕೆ ರವಾನಿಸುತ್ತಾರೆ. ಪ್ರತ್ಯೇಕಿಸಿದ ಅಪಾಯಕಾರಿ ಗ್ಲಾಸ್ ಚೀಲಗಳನ್ನು ಮತ್ತು ಮರದ ತುಂಡುಗಳನ್ನು ನಗರಸಭೆಗೆ ನೀಡುತ್ತಾರೆ. ಸ್ವಚ್ಛ ಸ್ಥಳದಲ್ಲಿ ಗುಂಡಿ ತೋಡಿ ದೇವರ ಚಿತ್ರಗಳನ್ನು ಮಣ್ಣಿನಲ್ಲಿ ಐಕ್ಯವಾಗುವಂತೆ ವ್ಯವಸ್ಥಿತ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ.
ಈ ಅಭಿಯಾನ ಪ್ರತಿ ಭಾನುವಾರ ಬೆಳಿಗ್ಗೆ ಆರರಿಂದ ಒಂಭತ್ತರವರೆಗೆ ನಡೆಯುತ್ತಿದ್ದು, ಈಗಾಗಲೇ ನಿರೀಕ್ಷೆಗೂ ಮೀರಿದ ಪ್ರಮಾಣದಲ್ಲಿ ತ್ಯಾಜ್ಯ ಶೇಖರಣೆಯಾಗಿದ್ದು ವೃತ್ತಿನಿರತ ಛಾಯಾಗ್ರಹಕರ ಸಂಘ ಎಸ್ ಕೆ ಪಿ ಎ ಉಡುಪಿ ವಲಯದ ಅಧ್ಯಕ್ಷ ಜನಾರ್ದನ ಕೊಡವೂರು ಹಾಗೂ ಈ ಅಭಿಯಾನದ ಸಂಚಾಲಕರಾದ ಸುರಭೀ ರತನ್ ಮತ್ತು ಸಂಘದ ಎಲ್ಲ ಉತ್ಸಾಹಿ ಛಾಯಾಗ್ರಾಹಕ ಸದಸ್ಯರೊಂದಿಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರು ಹಾಗೂ ನಗರಸಭಾ ಸದಸ್ಯ ವಿಜಯ್ ಕೊಡವೂರು, ಮತ್ತು ವಾರ್ಡ್ ಅಭಿವೃದ್ಧಿ ಸಮಿತಿ ಕೊಡವೂರು ಸಾಥ್ ನೀಡುತ್ತಲಿದ್ದು ಜನಸಾಮಾನ್ಯರಿಗೆ ದೇವರ ಚಿತ್ರಗಳ ವಿಲೇವಾರಿ ಸಮಸ್ಯೆಗೆ ಮುಕ್ತಿ ಸಿಕ್ಕಂತಾಗಿ ಈ ರೀತಿಯ ಧರ್ಮ ಜಾಗೃತಿ ಹಾಗು ಪರಿಸರ ಸ್ನೇಹಿ ಅಭಿಯಾನಕ್ಕೆ ಧಾರ್ಮಿಕ ಮುಖಂಡರು ಹಾಗೂ ಪರಿಸರ ಪ್ರೇಮಿಗಳು ನಾಗರಿಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಸಹಕರಿಸುತ್ತಿದ್ದಾರೆ.












