ಬೆಳ್ತಂಗಡಿ: ಪ್ರವಾಹ ಪೀಡಿತ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಶಾಸಕ ಹರೀಶ್ ಪೂಂಜಾ ಅವರ ನೇತೃತ್ವದಲ್ಲಿ ಪರಿಹಾರ ಕಾರ್ಯ, ಸ್ವಚ್ಚತಾ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ.
ಭೀಕರ ನೆರೆಯಿಂದಾಗಿ ನಲುಗಿದ ಚಾರ್ಮಾಡಿ ಸಮೀಪದ ಕೊಳಂಬೆ ನೆರೆಪೀಡಿತ ಪ್ರದೇಶದ ಜನರಿಗೆ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ದಿನನಿತ್ಯದ ಬಳಕೆಯ ವಸ್ತುಗಳನ್ನು ವಿತರಿಸಲಾಯಿತು.
ಮೃತ್ಯುಂಜಯ ಹೊಳೆಯ ಪಕ್ಕದಲ್ಲಿರೋ ಸುಮಾರು ಇಪ್ಪತ್ತೆರಡು ಮನೆಗಳಿಗೆ ಹಾನಿಯಾಗಿದ್ದು, ಖಾಸಗಿ ಸಂಸ್ಥೆಯ ವತಿಯಿಂದ ಮನೆ ನಿರ್ಮಾಣ ಹಾಗೂ ದುರಸ್ಥಿ ಮಾಡಿಕೊಡಲಾಗುತ್ತಿದೆ. ಸಾಕಷ್ಟು ಮಂದಿ ಸೇವಕರು ಸ್ವಯಂಪ್ರೇರಣೆಯಿಂದ ನೆರೆಪೀಡಿತ ಊರಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತೆರವು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಸುಮಾರು ಐನೂರಕ್ಕೂ ಹೆಚ್ಚು ಮಂದಿ ನೆರೆ ಪೀಡಿತ ಊರಿನ ಜನರಿಗೆ ಹೊಸ ಬದುಕು ಕಟ್ಟಿಕೊಡಲು ಶ್ರಮಿಸುತ್ತಿದ್ದಾರೆ.
ನೆರೆಸಂತ್ರಸ್ತರಿಗೆ ಅಗತ್ಯ ಸಾಮಾಗ್ರಿಗಳನ್ನು ವಿತರಿಸಿದ ಬಳಿಕ ಮಾತನಾಡಿದ ಶಾಸಕ ಪೂಂಜಾ, ಸರ್ಕಾರದ ವತಿಯಿಂದ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸುತ್ತೇನೆ ಎಂದು ತಿಳಿಸಿದರು.












