ಕುಕ್ಕೆ ಸುಬ್ರಹ್ಮಣ್ಯ: ದೇವರ ದರ್ಶನ ಸಮಯದಲ್ಲಿ ಬದಲಾವಣೆ

ಕಡಬ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರ ಅನುಕೂಲಕ್ಕಾಗಿ ದೇವರ ದರ್ಶನ ಸಮಯದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿ ಹೊಸ ವೇಳಾಪಟ್ಟಿಯನ್ನು ಜಾರಿಗೆ ತಂದಿದ್ದು, ಭಕ್ತರಿಗೆ ಇದೀಗ ಪ್ರತಿದಿನ ಹೆಚ್ಚುವರಿ ಒಂದು ಗಂಟೆ ದರ್ಶನದ ಅವಕಾಶ ದೊರೆಯಲಿದೆ.

ಈ ಮೊದಲು ಮಧ್ಯಾಹ್ನ 1.30ರಿಂದ 3.30ರವರೆಗೆ ದೇವರ ದರ್ಶನವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುತ್ತಿತ್ತು. ಆದರೆ ಹೊಸ ನಿರ್ಧಾರದಂತೆ ಇದೀಗ ಮಧ್ಯಾಹ್ನ 2.00ರಿಂದ 3.00ರವರೆಗೆ ಮಾತ್ರ ದೇವಸ್ಥಾನ ಬಂದ್ ಮಾಡಲಾಗುತ್ತದೆ. ಇದರಿಂದ ಮಧ್ಯಾಹ್ನದ ವೇಳೆಯಲ್ಲಿ ಭಕ್ತರಿಗೆ ಹೆಚ್ಚುವರಿ ದರ್ಶನ ಸೌಲಭ್ಯ ಲಭ್ಯವಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯದ ವಿವಿಧ ಭಾಗಗಳ ಜೊತೆಗೆ ಹೊರರಾಜ್ಯಗಳಿಂದಲೂ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ವಿಶೇಷವಾಗಿ ಸರ್ಪಸಂಸ್ಕಾರ, ಆಶ್ಲೇಷ ಬಲಿ ಸೇರಿದಂತೆ ವಿವಿಧ ಸೇವೆಗಳಿಗಾಗಿ ಪ್ರತಿದಿನ ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಮಾತನಾಡಿ, ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ದರ್ಶನ ಸಮಯವನ್ನು ವಿಸ್ತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಹೊಸ ದರ್ಶನ ವೇಳಾಪಟ್ಟಿ

  • ಬೆಳಗ್ಗೆ 6.30ರಿಂದ ಮಧ್ಯಾಹ್ನ 2.00ರವರೆಗೆ ದರ್ಶನ
  • ಮಧ್ಯಾಹ್ನ 2.00ರಿಂದ 3.00ರವರೆಗೆ ದೇವಸ್ಥಾನ ಬಂದ್
  • ಮಧ್ಯಾಹ್ನ 3.00ರಿಂದ ರಾತ್ರಿ 8.30ರವರೆಗೆ ದರ್ಶನ

ಇನ್ನು ಶ್ರೀ ದೇವರ ಮಧ್ಯಾಹ್ನ ಹಾಗೂ ರಾತ್ರಿ ಮಹಾಪೂಜೆ ನಡೆಯುವ ಸಮಯದಲ್ಲಿ ಮಾತ್ರ ಹಿಂದಿನಂತೆ ಅಲ್ಪಾವಧಿಗೆ ದರ್ಶನ ಸ್ಥಗಿತಗೊಳ್ಳಲಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಮಾಹಿತಿ ನೀಡಿದೆ.