ಬ್ಯಾಂಕ್ ಖಾತೆ ಮತ್ತು ಲಾಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಏನೆಲ್ಲಾ ಬದಲಾವಣೆ, ಹೊಸ ರೂಲ್ಸ್ ಏನು?

ನಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಬಂದಿದೆ. ಮುಂದಿನ ತಿಂಗಳು, ಅಂದರೆ ನವೆಂಬರ್ 1ರಿಂದ, ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು “ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ, 2025” ಅಡಿಯಲ್ಲಿ ಈ ಹೊಸ ನಿಯಮಗಳನ್ನು ತರಲು ನಿರ್ಧರಿಸಿದೆ.

ಖಾತೆಗೆ ನಾಲ್ಕು ನಾಮಿನಿ ಹಾಕಬಹುದು:

ಇದುವರೆಗೂ ಬ್ಯಾಂಕ್ ಖಾತೆಗೆ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಸೇರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈಗಿನಿಂದ ನೀವು ನಿಮ್ಮ ಒಂದು ಬ್ಯಾಂಕ್ ಖಾತೆಗೆ ಗರಿಷ್ಠ ನಾಲ್ವರನ್ನು ನಾಮಿನಿಯಾಗಿ ಸೇರಿಸಬಹುದು. ಅಷ್ಟೇ ಅಲ್ಲ, ಯಾರಿಗೆ ಎಷ್ಟು ಪಾಲು ಸಿಗಬೇಕು ಎಂಬುದನ್ನೂ ನೀವು ಸ್ವತಃ ನಿಗದಿಪಡಿಸಬಹುದು.

ಉದಾಹರಣೆಗೆ –ಮೊದಲ ನಾಮಿನಿಗೆ 40%, ಎರಡನೆಯವರಿಗೆ 30%, ಮೂರನೆಯವರಿಗೆ 20%, ನಾಲ್ಕನೆಯವರಿಗೆ 10%. ಒಟ್ಟು ಮೊತ್ತ 100% ಆಗಿರಬೇಕು. ಈ ರೀತಿಯಾಗಿ ಮೊತ್ತವನ್ನು ಹಂಚಿಕೊಳ್ಳುವುದರಿಂದ, ಖಾತೆದಾರನ ಮರಣದ ನಂತರ ಕುಟುಂಬದಲ್ಲಿ ಹಣದ ವಿಚಾರಕ್ಕೆ ಯಾವುದೇ ಜಗಳ ಅಥವಾ ಗೊಂದಲ ಉಂಟಾಗುವುದಿಲ್ಲ.

ಲಾಕರ್‌ಗಳಿಗೆ ಹೊಸ ನಿಯಮ :ಬ್ಯಾಂಕ್ ಲಾಕರ್‌ಗಳ ವಿಷಯದಲ್ಲಿ ಸ್ವಲ್ಪ ವಿಭಿನ್ನ ನಿಯಮವಿದೆ. ಇಲ್ಲಿ ನಾಮಿನಿಗಳನ್ನು “ಸತತ ನಾಮನಿರ್ದೇಶನ (Successive Nomination)” ಮಾದರಿಯಲ್ಲಿ ಮಾತ್ರ ಹಾಕಬಹುದು.ಅಂದರೆ, ಮೊದಲ ನಾಮಿನಿ (ಉದಾಹರಣೆಗೆ ಪತ್ನಿ) ಲಭ್ಯವಿಲ್ಲದಿದ್ದರೆ ಅಥವಾ ನಿಧನರಾದರೆ, ಆಗ ಎರಡನೇ ನಾಮಿನಿಗೆ (ಉದಾ: ಮಗ) ಲಾಕರ್‌ನ ಹಕ್ಕು ಸಿಗುತ್ತದೆ.ಈ ನಿಯಮದಿಂದ ಲಾಕರ್‌ನ ಹಕ್ಕು ಹಸ್ತಾಂತರ ಪ್ರಕ್ರಿಯೆ ಸ್ಪಷ್ಟವಾಗಿ ಮತ್ತು ಪಾರದರ್ಶಕವಾಗಿ ನಡೆಯುತ್ತದೆ.

ಹೊಸ ನಾಮಿನಿ ಪ್ರಕ್ರಿಯೆ

ಹೊಸ ನಿಯಮಗಳ ಮೂಲಕ ಖಾತೆದಾರರಿಗೆ ತಮ್ಮ ಇಷ್ಟದ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಿದೆ. ಬ್ಯಾಂಕುಗಳು ಈ ಹೊಸ ನಾಮಿನಿ ಪ್ರಕ್ರಿಯೆಯನ್ನು ಹೇಗೆ ಜಾರಿಗೆ ತರಬೇಕು ಎಂಬುದರ ಕುರಿತು ಸರ್ಕಾರ ಶೀಘ್ರದಲ್ಲೇ “ಬ್ಯಾಂಕಿಂಗ್ ಕಂಪನಿಗಳ (ನಾಮನಿರ್ದೇಶನ) ನಿಯಮಗಳು, 2025” ಎಂಬ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಿದೆ.

ಬದಲಾವಣೆಯ ಉದ್ದೇಶ:

ಈ ಬದಲಾವಣೆಗಳು ಆರ್ಬಿಐ ಕಾಯ್ದೆ, 1934 ಮತ್ತು ಎಸ್ಬಿಐ ಕಾಯ್ದೆ, 1955 ಮುಂತಾದ ಹಳೆಯ ಕಾನೂನುಗಳನ್ನು ನವೀಕರಿಸುವ ಭಾಗವಾಗಿದೆ.

  • ಬ್ಯಾಂಕ್ ಖಾತೆದಾರರ ಸುರಕ್ಷತೆ ಹೆಚ್ಚಿಸುವುದು,
  • ಲಾಕರ್‌ಗಳ ಹಕ್ಕು ಹಸ್ತಾಂತರವನ್ನು ಸುಗಮಗೊಳಿಸುವುದು,
  • ಸಾರ್ವಜನಿಕರಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಬಲಪಡಿಸುವುದು.

ಒಟ್ಟಿನಲ್ಲಿ, ನವೆಂಬರ್ 1ರಿಂದ ಆರಂಭವಾಗುವ ಈ ಹೊಸ ನಿಯಮಗಳು ಖಾತೆದಾರರಿಗೆ ಹೆಚ್ಚಿನ ಸೌಲಭ್ಯ, ಪಾರದರ್ಶಕತೆ ಮತ್ತು ಭದ್ರತೆ ಒದಗಿಸಲಿವೆ. ಆದ್ದರಿಂದ, ನಿಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ನ ನಾಮಿನಿ ವಿವರಗಳನ್ನು ಈಗಲೇ ಪರಿಶೀಲಿಸಿ ಮತ್ತು ಅಗತ್ಯ ಬದಲಾವಣೆಗಳನ್ನು ಮಾಡಿ!