ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರಮುಖ ಸಚಿವರ ಖಾತೆಗಳನ್ನು ಬದಲಾವಣೆ ಮಾಡಿದ್ದು, ಬಿ. ಶ್ರೀರಾಮುಲು ಅವರ ಬಳಿ ಇದ್ದ ಆರೋಗ್ಯ ಖಾತೆಯನ್ನು ಡಾ.ಕೆ. ಸುಧಾಕರ್ ಅವರಿಗೆ ಹಂಚಿಕೆ ಮಾಡಿದ್ದಾರೆ. ಇದರಿಂದ ಶ್ರೀರಾಮುಲು ಸಿಎಂ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.
ಶ್ರೀರಾಮುಲು ಅವರಿಗೆ ಉಪಮುಖ್ಯಮಂತ್ರಿ ಗೋವಿಂದಕಾರಜೋಳ ಅವರ ಬಳಿ ಇದ್ದ ಸಮಾಜ ಕಲ್ಯಾಣ ಖಾತೆಯನ್ನು ಹಂಚಿಕೆ ಮಾಡಿದ್ದಾರೆ. ಕಾರಜೋಳ ಅವರ ಬಳಿ ಲೋಕೋಪಯೋಗಿ ಖಾತೆ ಉಳಿದಿದೆ. ರಾಮುಲು ಬಳಿ ಇದ್ದ ಹಿಂದುಳಿದ ವರ್ಗಗಳ ಖಾತೆ ಮುಖ್ಯಮಂತ್ರಿ ತಮ್ಮ ಬಳಿ ಇಟ್ಟುಕೊಂಡಿದ್ದಾರೆ.
ಈ ಬೆಳವಣಿಗೆಯಿಂದ ಶ್ರೀರಾಮುಲು ಅಸಮಾಧಾನಗೊಂಡಿದ್ದಾರೆ. ಸಮಾಜ ಕಲ್ಯಾಣ ಖಾತೆ ನೀಡಿದರೂ ಶ್ರೀರಾಮಲು ಸಂತೋಷಗೊಂಡಿಲ್ಲ. ಅಲ್ಲದೆ ಸಚಿವ ಸ್ಥಾನಕ್ಕೂ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಖಾತೆ ಬದಲಾವಣೆಗೆ ಸಂಬಂಧಿಸಿದಂತೆ ಶ್ರೀರಾಮುಲು ಸಿಎಂ ಭೇಟಿಯಾಗಿ ಅರ್ಧ ಗಂಟೆಕ್ಕಿಂತಲೂ ಹೆಚ್ಚು ಸಮಯ ಸಮಾಲೋಚನೆ ನಡೆಸಿದ್ದಾರೆ. ಸಿಎಂ ಕಚೇರಿಯಿಂದ ಹೊರಬಂದ ರಾಮುಲು ಯಾವುದೇ ಪ್ರತಿಕ್ರಿಯೆ ನೀಡದೆ ತೆರಳಿದ್ದಾರೆ. ಖಾತೆ ಬದಲಾವಣೆ ಮಾಡಿದ್ದರಿಂದ ತೀವ್ರ ಅಸಮಾಧಾನಗೊಂಡಿರುವ ಅವರು, ಮುಂದೆ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುವುದನ್ನು ಕಾದುನೋಡಬೇಕಿದೆ.