ಮಂಗಳೂರು: ಮೇ 3ರಂದು ಮುಲ್ಕಿಯ ಕೊಲ್ನಾಡು ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನವ ಕರ್ನಾಟಕ ಸಂಕಲ್ಪ ಸಮಾವೇಶ ಹಿನ್ನೆಲೆಯಲ್ಲಿ ಸಮಾವೇಶ ನಡೆಯುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚಾರ ಬದಲಾವಣೆ ಮಾಡಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಭದ್ರತೆಯ ಹಿತದೃಷ್ಟಿಯಿಂದ ಮೇ 3 ರ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಸಂಚಾರದಲ್ಲಿ ಮಾರ್ಪಾಡು ಮಾಡಲಾಗಿದೆ.
ಬೆಳಗ್ಗೆ ಸುಮಾರು 10.30ರ ಬಳಿಕ ಪ್ರಧಾನಿ ಮೋದಿ ಕೊಲ್ನಾಡು ಹೆಲಿಪ್ಯಾಡ್ನಿಂದ ಕಾರ್ಯಕ್ರದ ಸ್ಥಳಕ್ಕೆ ಹೋಗುವವರೆಗೆ ಹಳೆಯಂಗಡಿ ಜಂಕ್ಷನ್ ಬಳಿಯಿಂದ ಹಾಗೂ ಕಾರ್ನಾಡು ಬೈಪಾಸ್ ಬಳಿಯಿಂದ ಕಾರ್ಯಕ್ರಮದ ಸ್ಥಳದವರೆಗೆ ಸಾರ್ವಜನಿಕರ ವಾಹನ ಸಂಚಾರ ನಿಷೇಧಿಸಲಾಗಿದೆ.
ವಾಹನ ಪಾರ್ಕಿಂಗ್ ಗೆ ನಿಷೇಧ
ಪ್ರಧಾನ ಮಂತ್ರಿಯವರು ಮೇ 3 ರ ಬೆಳಿಗ್ಗೆ 10.30 ಕ್ಕೆ ಮೈದಾನಕ್ಕೆ ಆಗಮಿಸಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಭೆಯಲ್ಲಿ ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇರುವುದರಿಂದ ರಾಷ್ಟ್ರೀಯ ಹೆದ್ದಾರಿಯ ಹಳೆಯಂಗಡಿಯಿಂದ ಕಾರ್ನಾಡ್ ಬೈಪಾಸ್ವರೆಗಿನ ಎರಡು ಬದಿಗಳಲ್ಲಿ ವಾಹನ ನಿಲುಗಡೆಯನ್ನು ಸಂಪೂರ್ಣ ನಿಷೇಧಿಸಲಾಗಿದೆ.
ರಾಷ್ಟ್ರೀಯ ಹೆದ್ದಾರಿಯ ಕೊಲ್ನಾಡು ಜಂಕ್ಷನ್ನಿಂದ ಕೈಗಾರಿಕಾ ಪ್ರದೇಶಕ್ಕೆ ಹಾಗೂ ಕೆ.ಎಸ್. ರಾವ್ ನಗರಕ್ಕೆ ಹೋಗುವ ರಸ್ತೆಗಳಲ್ಲಿ ಸಭಾ ಕಾರ್ಯಕ್ರಮಕ್ಕೆ ಬರುವ ವಾಹನ ಹೊರತುಪಡಿಸಿ ಇತರೆ ಎಲ್ಲ ವಾಹನಗಳ ಸಂಚಾರ ನಿಷೇಧಿಸಿದೆ. ತುರ್ತು ಸೇವೆಯ ವಾಹನಗಳಿಗೆ ಸಂಚಾರಕ್ಕೆ ಅವಕಾಶವಿದೆ.
ವಾಹನ ಸಂಚಾರಕ್ಕೆ ಬದಲಿ ಮಾರ್ಗಗಳು:
1. ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಬರುವ ವಾಹನಗಳು ಮುಲ್ಕಿಯಿಂದ ಕಿನ್ನಿಗೋಳಿ ರಸ್ತೆಯಾಗಿ ಕಟೀಲು, ಬಜ್ಪೆ, ಕಾವೂರು ಮಾರ್ಗವಾಗಿ ಮಂಗಳೂರಿಗೆ ಸಂಚರಿಸಬೇಕಿದೆ.
2. ಮಂಗಳೂರು ಕಡೆಯಿಂದ ಉಡುಪಿಗೆ ತೆರಳುವ ವಾಹನಗಳು ಕೆಪಿಟಿ ಜಂಕ್ಷನ್ ನಿಂದ ಬಲಕ್ಕೆ ಬೋಂದೆಲ್, ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ, ಮುಲ್ಕಿ ಕಡೆಗೆ ಅಥವಾ ಕೂಳೂರು ಜಂಕ್ಷನ್ ನಿಂದ ಕಾವೂರು, ಬಜ್ಪೆ, ಕಟೀಲು, ಕಿನ್ನಿಗೋಳಿ, ಮುಲ್ಕಿ ಕಡೆಗೆ ಸಂಚರಿಸಿ ಬಳಿಕ ರಾ.ಹೆ. 66 ರ ಮೂಲಕ ಉಡುಪಿಗೆ ತೆರಳಲು ಸೂಚನೆ ನೀಡಲಾಗಿದೆ.
3. ಸುರತ್ಕಲ್ ಕಡೆಯಿಂದ ಉಡುಪಿ ಕಡೆಗೆ ತೆರಳುವ ವಾಹನಗಳು ಹಳೆಯಂಗಡಿಯಿಂದ ಬಲಕ್ಕೆ ತಿರುಗಿ ಪಕ್ಷಿಕೆರೆ, ಎಸ್. ಕೋಡಿ ಮಾರ್ಗವಾಗಿ ಮುಲ್ಕಿ ತಲುಪಿ ರಾ.ಹೆದ್ದಾರಿ ಮೂಲಕ ಉಡುಪಿ ಕಡೆ ಸಂಚರಿಸಲು ಸೂಚನೆ ನೀಡಲಾಗಿದೆ.
ವಾಹನ ನಿಲುಗಡೆ ಸ್ಥಳಗಳು
ಮಂಗಳೂರು ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಬೆಳಗ್ಗೆ 9 ಗಂಟೆಯ ಒಳಗೆ ಸಾರ್ವಜನಿಕರನ್ನು ಕಾರ್ಯಕ್ರಮ ಸ್ಥಳದ ಸಾರ್ವಜನಿಕರ ಪ್ರವೇಶ ದ್ವಾರದ ಬಳಿ ಇಳಿಸಿ ಜಾಗತಿಕ ಬಂಟರ ಸಂಘದ ಬಳಿ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಬೇಕು.
ಉಡುಪಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ಬಸ್ಸುಗಳು ಕಾರ್ನಾಡು ಬೈಪಾಸಿನಲ್ಲಿ ಸಾರ್ವಜನಿಕರನ್ನು ಯು-ಟರ್ನ್ ಮಾಡಿ ಜಾಗತಿಕ ಬಂಟರ ಸಂಘದ ಬಳಿಯ ಪಡುಬೈಲು ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಬೇಕು.
ಮಂಗಳೂರು -ಉಡುಪಿ ಕಡೆಯಿಂದ ಬರುವ ಸಾರ್ವಜನಿಕ ಲಘುವಾಹನಗಳು ಹಾಗೂ ದ್ವಿ-ಚಕ್ರ ವಾಹನಗಳು ಕಾರ್ಯಕ್ರಮ ಸ್ಥಳದ ಎದುರು ಉಡುಪಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಎಡ ಬದಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಬೇಕು.
ಮಂಗಳೂರು ಕಡೆಯಿಂದ ಆಗಮಿಸುವ ಸಾರ್ವಜನಿಕ ಲಘುವಾಹನಗಳು ಹಾಗೂ ದ್ವಿ-ಚಕ್ರ ವಾಹನಗಳು ಮಂಗಳೂರು- ಉಡುಪಿ ರಸ್ತೆಯ ಎಡಬದಿಯಲ್ಲಿರುವ ಸುಂದರ್ರಾಮ್ ಶೆಟ್ಟಿ ಕನ್ವೆನ್ಶನ್ ಹಾಲ್ ಬಳಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಬೇಕು.
ವಿ.ಐ.ಪಿ ವಾಹನಗಗಳನ್ನು ಕಾರ್ಯಕ್ರಮ ನಡೆಯುವ ಪಶ್ಚಿಮ ಬದಿಯಲ್ಲಿನ ಮಂಗಳೂರು ಉಡುಪಿ ರಸ್ತೆಯ ಎಡಬದಿಯ ಪಾರ್ಕಿಂಗ್ ಸ್ಥಳದಲ್ಲಿ ನಿಲುಗಡೆ ಮಾಡಲು ಅವಕಾಶ ಕಲ್ಪಿಸಲಾಗಿದೆ.