ವಾಶಿಂಗ್ಟನ್ : ಬಾಹ್ಯಾಕಾಶ ಪರಿಶೋಧನೆಯಲ್ಲಿ ಅಮೆರಿಕದ ನಾಯಕತ್ವವನ್ನು ಕಾಪಾಡಿಕೊಳ್ಳಲು ಮತ್ತು 2025 ರ ವೇಳೆಗೆ ಮಂಗಳ ಗ್ರಹದಲ್ಲಿ ಭವಿಷ್ಯದ ಕಾರ್ಯಾಚರಣೆಗಳಿಗೆ ತಯಾರಿ ನಡೆಸಲು ಚಂದ್ರನ ಮೇಲೆ ಮತ್ತೊಮ್ಮೆ ಮಾನವರನ್ನು ಕಳುಹಿಸುವ ಗುರಿಯನ್ನು ನಾಸಾ ಹೊಂದಿದೆ. ಆದರೆ ಅದರ ಮಾನವ ಲ್ಯಾಂಡಿಂಗ್ ವ್ಯವಸ್ಥೆ ಮತ್ತು ಸ್ಪೇಸ್ ಸೂಟ್ ವಿನ್ಯಾಸದಲ್ಲಿ ಹಲವಾರು ಸಮಸ್ಯೆಗಳನ್ನು ಜಿಎಒ ಪತ್ತೆ ಮಾಡಿದ್ದು, ಇವುಗಳನ್ನು 2027 ಕ್ಕಿಂತ ಮೊದಲು ಪರಿಹರಿಸಲು ಸಾಧ್ಯವಾಗದು ಎನ್ನಲಾಗಿದೆ.
1972ರ ನಂತರ ಮತ್ತೊಮ್ಮೆ ಚಂದ್ರನಲ್ಲಿಗೆ ಮಾನವರನ್ನು ಕಳುಹಿಸಲು ಯೋಜಿಸಲಾದ ನಾಸಾದ ಆರ್ಟೆಮಿಸ್-3 (Artemis III) ಮಿಷನ್ ಮುಂದೂಡಿಕೆಯಾಗಿದೆ. ಈ ಮುನ್ನ 2025ರ ಆರಂಭದಲ್ಲಿ ಈ ಚಂದ್ರಯಾನ ಆರಂಭವಾಗಬೇಕಿತ್ತು. ನಾಸಾದ ಮಾನವಸಹಿತ ಚಂದ್ರಯಾನ ಮಿಷನ್ 2027ಕ್ಕೆ ಮುಂದೂಡಿಕೆಯಾಗಿದೆ. ಆದರೆ ಈಗ 2027ಕ್ಕೆ ಮುಂದೂಡಲಾಗಿದೆ ಎಂದು ಯುಎಸ್ ಸರ್ಕಾರಿ ಉತ್ತರದಾಯಿತ್ವ ಕಚೇರಿಯ (ಜಿಎಒ) (US Government Accountability Office) ವರದಿ ಹೇಳಿದೆ.
ಇನ್ನು ಈ ವಿಳಂಬದಿಂದ ಮುಂದಿನ ಆರ್ಟೆಮಿಸ್ ಯೋಜನೆಗಳು ಕೂಡ ವಿಳಂಬವಾಗುವ ಸಾಧ್ಯತೆಗಳಿವೆ. ಆರ್ಟೆಮಿಸ್-4 ಅನ್ನು ಪ್ರಸ್ತುತ 2028 ಕ್ಕೆ ಯೋಜಿಸಲಾಗಿದೆ. ಇದರ ನಂತರ ಆರ್ಟೆಮಿಸ್ 5 ರಿಂದ 7 ರವರೆಗಿನ ಯೋಜನೆಗಳು 2029 ರಿಂದ ವಾರ್ಷಿಕವಾಗಿ ಪ್ರಾರಂಭವಾಗುವ ನಿರೀಕ್ಷೆಯಿದೆ. ನಾಸಾದ ಸಿದ್ಧತೆಗಳನ್ನು ಪರೀಕ್ಷಿಸಲು ಜಿಎಒ ಏಜೆನ್ಸಿಯ ಡೇಟಾ, ದಸ್ತಾವೇಜು ಮತ್ತು ನೀತಿಯನ್ನು ಮೌಲ್ಯಮಾಪನ ಮಾಡಿದೆ.
“ಮಾನವ ಬಾಹ್ಯಾಕಾಶ ಯಾನವು ತೀರಾ ಸಂಕೀರ್ಣವಾಗಿರುವುದರಿಂದ ಈ ಕಾರ್ಯಕ್ರಮವು ನಾಸಾದ ಪ್ರಮುಖ ಯೋಜನೆಗಳ ಸರಾಸರಿಗಿಂತ ಒಂದು ವರ್ಷ ಮುನ್ನ ಸಿದ್ಧವಾಗುತ್ತದೆ ಎಂದು ನಿರೀಕ್ಷಿಸುವುದು ಅವಾಸ್ತವಿಕ” ಎಂದು ವರದಿ ಹೇಳಿದೆ. ಆರ್ಟೆಮಿಸ್ III ಮೂಲಕ ನಾಸಾ ಚಂದ್ರನ ಮೇಲೆ ಮೊದಲ ಮಹಿಳೆ ಮತ್ತು ಭಿನ್ನ ಜನಾಂಗದ ಮೊದಲ ವ್ಯಕ್ತಿಯನ್ನು ಇಳಿಸುವ ಗುರಿಯನ್ನು ಹೊಂದಿದೆ.
“ಆರ್ಟೆಮಿಸ್ ಕಾರ್ಯಾಚರಣೆಗಳ ಬಗ್ಗೆ ಈ ಹಿಂದಿಗಿಂತ ನಾಸಾ ಮತ್ತು ಅದರ ಗುತ್ತಿಗೆದಾರರು ಪ್ರಗತಿ ಸಾಧಿಸಿದ್ದಾರೆ. ಆದರೆ ಚಂದ್ರನ ಲ್ಯಾಂಡರ್ ಮತ್ತು ಬಾಹ್ಯಾಕಾಶ ಸೂಟ್ಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಸವಾಲು ಎದುರಿಸುತ್ತಿದ್ದಾರೆ” ಎಂದು ವರದಿ ಹೇಳಿದೆ. “ಉದಾಹರಣೆಗೆ ನೋಡುವುದಾದರೆ- ಕೆಲ ವೈಮಾನಿಕ ಪರೀಕ್ಷೆಗಳು ವಿಳಂಬವಾಗಿವೆ ಹಾಗೂ ಇದು ಮುಂದಿನ ಪರೀಕ್ಷೆಗಳ ಸಮಯದ ಮೇಲೆ ಪರಿಣಾಮ ಬೀರಬಹುದು. ಅಲ್ಲದೆ ಗಮನಾರ್ಹ ಪ್ರಮಾಣದ ಸಂಕೀರ್ಣ ಕೆಲಸ ಬಾಕಿ ಉಳಿದಿದೆ. ಇದರ ಪರಿಣಾಮವಾಗಿ ಯೋಜಿಸಿದಂತೆ 2025 ರಲ್ಲಿ ಚಂದ್ರನ ಲ್ಯಾಂಡಿಂಗ್ ಮಿಷನ್ ಸಾಕಾರಗೊಳ್ಳುವ ಸಾಧ್ಯತೆಯಿಲ್ಲ ಎಂಬುದನ್ನು ನಾವು ಕಂಡುಕೊಂಡಿದ್ದೇವೆ” ಎಂದು ಅದು ಹೇಳಿದೆ.