ಭೂಮಿಯ ಕಕ್ಷೆ ತೊರೆದು ಚಂದ್ರನ ಕಕ್ಷೆಗೆ ಜಿಗಿದ ಚಂದ್ರಯಾನ: ಮುಂದಿನ ನಿಲ್ದಾಣ ಚಂದ್ರನ ಅಂಗಳ

ಶ್ರೀಹರಿಕೋಟಾ: ಇಲ್ಲಿನ ಉಪಗ್ರಹ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾದ ಹದಿನೈದು ದಿನಗಳ ನಂತರ, ಚಂದ್ರಯಾನ -3 ಭೂಮಿಯ ಸುತ್ತ ತನ್ನ ಕಕ್ಷೆಯನ್ನು ಪೂರ್ಣಗೊಳಿಸಿದೆ ಮತ್ತು ಮಿಷನ್‌ನ ಮುಂದಿನ ಹಂತಕ್ಕೆ ಚಂದ್ರನ ಕಡೆಗೆ ಹೊರಟಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸೋಮವಾರ ತಡರಾತ್ರಿ ಘೋಷಿಸಿದೆ.

ISTRAC ನಲ್ಲಿ ನಡೆಸಿದ ಯಶಸ್ವಿ ಪೆರಿಜಿ-ಫೈರಿಂಗ್, ಇಸ್ರೋ(ISRO) ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ನೂಕಿದೆ. ಇನ್ನು ಮುಂದಿನ ನಿಲ್ದಾಣ ಚಂದ್ರ. ಇದು ಚಂದ್ರನತ್ತ ಆಗಮಿಸುತ್ತಿದ್ದಂತೆ, ಚಂದ್ರ-ಕಕ್ಷೆಯ ಒಳಸೇರಿಸುವಿಕೆಯನ್ನು (LOI) ಆಗಸ್ಟ್ 5 ರಂದು ಯೋಜಿಸಲಾಗಿದೆ ಎಂದು ಬಾಹ್ಯಾಕಾಶ ನೌಕೆಯನ್ನು ಟ್ರಾನ್ಸ್‌ಲೂನಾರ್ ಕಕ್ಷೆಗೆ ಯಶಸ್ವಿಯಾಗಿ ಸೇರಿಸಿದ ನಂತರ ಇಸ್ರೋ ಟ್ವೀಟ್ ಮಾಡಿದೆ.

ಸೋಮವಾರ ಮಧ್ಯರಾತ್ರಿ 12 ರಿಂದ 12.30 ರ ನಡುವೆ ಉಪಗ್ರಹವನ್ನು ಚಂದ್ರನ ಕಕ್ಷೆಗೆ ತಳ್ಳಲಾಗಿದೆ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಚಂದ್ರಯಾನ-3 ಮಿಷನ್ ನಿಗದಿತ ಸಮಯಕ್ಕೆ ಸರಿಯಾಗಿದೆ ಮತ್ತು ಬಾಹ್ಯಾಕಾಶ ನೌಕೆಯ ಆರೋಗ್ಯವು ಪ್ರಸ್ತುತ ಸಾಮಾನ್ಯವಾಗಿದೆ ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.