ನವದೆಹಲಿ:ಜು.14 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಜಿಎಸ್ಎಲ್ವಿ ಮಾರ್ಕ್ 3 (ಎಲ್ವಿಎಂ 3) ಹೆವಿ-ಲಿಫ್ಟ್ ಉಡಾವಣಾ ವಾಹನದಲ್ಲಿ ಯಶಸ್ವಿಯಾಗಿ ಉಡಾವಣೆಯಾದ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಸುಮಾರು ಮೂರನೇ ಎರಡರಷ್ಟು ದೂರವನ್ನು ಕ್ರಮಿಸಿದೆ. ಲೂನಾರ್ ಆರ್ಬಿಟ್ ಇಂಜೆಕ್ಷನ್ (LOI) ಅನ್ನು ಆಗಸ್ಟ್ 5, 2023ರಂದು ಸುಮಾರು 19:00(ಭಾರತೀಯ ಕಾಲಮಾನ- IST) ಗಂಟೆಗಳಿಗೆ ಹೊಂದಿಸಲಾಗಿದೆ ಎಂದು ಇಸ್ರೋ ತನ್ನ ಟ್ಬೀಟ್ನಲ್ಲಿ ತಿಳಿಸಿದೆ. ಭಾರತದ ಚಂದ್ರಯಾನ-3 ನೌಕೆ ಶುಕ್ರವಾರದ ವೇಳೆಗೆ ಭೂಮಿ ಮತ್ತು ಚಂದ್ರನ ನಡುವಿನ ಅಂತರದ 3ನೇ ಎರಡು ಭಾಗವನ್ನು ಕ್ರಮಿಸಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಟ್ವೀಟ್ ಮಾಡಿದೆ. ಇಸ್ರೋ ಬಾಹ್ಯಾಕಾಶ ನೌಕೆ ಚಂದ್ರಯಾನ-3 ಚಂದ್ರನ ಸುಮಾರು ಮೂರನೇ ಎರಡರಷ್ಟು ಅಂತರವನ್ನು ಯಶಸ್ವಿಯಾಗಿ ಕ್ರಮಿಸಿದೆ.
ಚಂದ್ರಯಾನ-3, ಭಾರತದ ಮೂರನೇ ಚಂದ್ರನ ಪರಿಶೋಧನೆ ಮಿಷನ್. ಚಂದ್ರನ ಮೇಲ್ಮೈಯಲ್ಲಿ ತನ್ನ ಬಾಹ್ಯಾಕಾಶ ನೌಕೆಯನ್ನು ಸುರಕ್ಷಿತವಾಗಿ ಇಳಿಸಿ ದೇಶದ ಸಾಮರ್ಥ್ಯವನ್ನು ಪ್ರದರ್ಶಿಸಲು ಸಜ್ಜಾಗಿದೆ ಈ ಮೂಲಕ ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಭಾರತ ಈ ಸಾಧನೆ ಮಾಡಿದ ನಾಲ್ಕನೇ ದೇಶವಾಗಲಿದೆ. ಜು.14, 2023 ರಂದು ಭಾರತೀಯ ಕಾಲಮಾನ 14:35ಕ್ಕೆ ಬಾಹ್ಯಾಕಾಶ ನೌಕೆಯನ್ನು ಎಲ್ವಿಎಂ 3ನಲ್ಲಿ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಚಂದ್ರನ ಕಕ್ಷೆಯನ್ನು ತಲುಪುವ ಉದ್ದೇಶದಿಂದ ಬಾಹ್ಯಾಕಾಶ ನೌಕೆಯು ಪ್ರಸ್ತುತ ಕಕ್ಷೆಯ ಕುಶಲತೆಯ ಸರಣಿಯನ್ನು ನಡೆಸುತ್ತಿದೆ.
ಚಂದ್ರಯಾನ-3 ಚಂದ್ರನ ಕಕ್ಷೆಯನ್ನು ತಲುಪಲು ಉಡಾವಣೆ ದಿನಾಂಕದಿಂದ ಸುಮಾರು 33 ದಿನಗಳನ್ನು ತೆಗೆದುಕೊಳ್ಳುತ್ತದೆ. ಇಳಿದ ನಂತರ ಇದು ಒಂದು ಚಂದ್ರನ ದಿನಕ್ಕೆ ಕಾರ್ಯ ನಿರ್ವಹಿಸುತ್ತದೆ. ಇದು ಸರಿಸುಮಾರು 14 ಭೂಮಿಯ ದಿನಗಳು. ಚಂದ್ರನ ಮೇಲಿನ ಒಂದು ದಿನವು ಭೂಮಿಯ ಮೇಲಿನ 14 ದಿನಗಳಿಗೆ ಸಮಾನವಾಗಿರುತ್ತದೆ. ಚಂದ್ರಯಾನ-3 ಘಟಕಗಳು ನ್ಯಾವಿಗೇಷನ್ ಸೆನ್ಸರ್ಗಳು, ಪ್ರೊಪಲ್ಷನ್ ಸಿಸ್ಟಮ್ಗಳು, ಮಾರ್ಗದರ್ಶನ ಮತ್ತು ನಿಯಂತ್ರಣದಂತಹ ಸುರಕ್ಷಿತ ಲ್ಯಾಂಡಿಂಗ್ ಅನ್ನು ಖಚಿತಪಡಿಸಿಕೊಳ್ಳಲು ಉದ್ದೇಶಿಸಿರುವ ವಿವಿಧ ಎಲೆಕ್ಟ್ರಾನಿಕ್ ಮತ್ತು ಯಾಂತ್ರಿಕ ಉಪವ್ಯವಸ್ಥೆಗಳನ್ನು ಒಳಗೊಂಡಿವೆ. ಹೆಚ್ಚುವರಿಯಾಗಿ, ರೋವರ್, ದ್ವಿಮುಖ ಸಂವಹನ – ಸಂಬಂಧಿತ ಆಂಟೆನಾಗಳು ಮತ್ತು ಇತರ ಆನ್ಬೋರ್ಡ್ ಎಲೆಕ್ಟ್ರಾನಿಕ್ಸ್ಗಳ ಬಿಡುಗಡೆಗೆ ಕಾರ್ಯ ವಿಧಾನಗಳಿವೆ.
ಮಹತ್ವದ ಪ್ರಕ್ರಿಯೆ ಹೇಗೆ ನಡೆಯಲಿದೆ?: ಇಸ್ರೋ ನೀಡಿದ ಮಾಹಿತಿ ಪ್ರಕಾರ ‘ಲೂನಾರ್ ಟ್ರಾನ್ಸ್ಫರ್ ಟ್ರಾಜೆಕ್ಟರಿ ಪಥದಲ್ಲಿ ಚಂದ್ರಯಾನ-3 ನೌಕೆ ಸಾಗುತ್ತಿದೆ. ಕಳೆದ ಸೋಮವಾರ ಮಧ್ಯ ರಾತ್ರಿ ಭೂ ಕಕ್ಷೆಯಿಂದ ಬೇರ್ಪಟ್ಟಿದ್ದ ನೌಕೆ ಚಂದ್ರನ ಕಡೆ ತೆರಳುತ್ತಿದೆ. ಚಂದ್ರಯಾನ-3 ನೌಕೆ ಚಂದ್ರನ ಸಮೀಪಕ್ಕೆ ಆಗಮಿಸುತ್ತಿದ್ದಂತೆ ‘ಲೂನಾರ್-ಆರ್ಬಿಟ್ ಇನ್ರ್ಸಶನ್’ ಅಂದರೆ ಎಲ್ಓಐ ಕಾರ್ಯ ಆರಂಭವಾಗುತ್ತದೆ. ಆ. 5ಕ್ಕೆ ಎಲ್ಓಐ ಮಾಡಲು ಯೋಜಿಸಿದ್ದೇವೆ ಎಂದು ಇಸ್ರೋ ಈ ಮೊದಲೇ ತಿಳಿಸಿತ್ತು.
ಉದ್ದೇಶಗಳು:
ಸುರಕ್ಷಿತ ಲ್ಯಾಂಡಿಂಗ್
ಚಂದ್ರನ ಮೇಲ್ಮೈಯಲ್ಲಿ ರೋವರ್ ರೋವಿಂಗ್ ಮತ್ತು ಇನ್-ಸಿಟು ವೈಜ್ಞಾನಿಕ ಪ್ರಯೋಗಗಳು.
ಚಂದ್ರಯಾನ-3 ರ ಅನುಮೋದಿತ ವೆಚ್ಚ ರೂ. 250 ಕೋಟಿಗಳು (ಉಡಾವಣಾ ವಾಹನದ ವೆಚ್ಚ ಹೊರತುಪಡಿಸಿ). ಚಂದ್ರಯಾನ-3 ರ ಅಭಿವೃದ್ಧಿಯ ಹಂತವು ಜನವರಿ 2020ರಲ್ಲಿ ಪ್ರಾರಂಭವಾಯಿತು. ಮೊದಲು 2021ರಲ್ಲಿ ಉಡಾವಣೆ ಮಾಡಲು ಯೋಜಿಸಲಾಗಿತ್ತು. ಆದರೆ ಕೋವಿಡ್ 19 ಸಾಂಕ್ರಾಮಿಕದಿಂದಾಗಿ ಮಿಷನ್ನ ಪ್ರಗತಿಗೆ ಅನಿರೀಕ್ಷಿತ ಹೊಡೆತ ನೀಡಿತ್ತು. ಚಂದ್ರಯಾನ-2 ಮಿಷನ್ ವಿಫಲವಾದ ಬಳಿಕ ಚಂದ್ರಯಾನ-3 ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಆಗಿದೆ. ಒಂದೊಮ್ಮೆ ಇದು ಸಕ್ಸಸ್ ಆದರೆ, ಅಮೆರಿಕ, ರಷ್ಯಾ ಚೀನಾಗಳ ಸಾಲಿಗೆ ಭಾರತ ಸೇರಲಿದೆ. ಅಷ್ಟೇ ಅಲ್ಲ ಇದು ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಆಗಲಿದೆ.
ಟ್ರಾನ್ಸ್ ಲೂನಾರ್ ಇಂಜೆಕ್ಷನ್(TLI) ಎಂದರೇನು?: ಟ್ರಾನ್ಸ್ ಲೂನಾರ್ ಇಂಜೆಕ್ಷನ್ ಎಂದರೆ ಕಕ್ಷೆ ಬದಲಿಸುವ ಪ್ರಕ್ರಿಯೆ. ಇದು ಬಾಹ್ಯಾಕಾಶ ನೌಕೆಯನ್ನು ಚಂದ್ರನ ಹಾದಿಗೆ ಕಳುಹಿಸಲು ಬೆನ್ನಲುಬು. ಈ ಪ್ರಕ್ರಿಯೆಯನ್ನು ರಾಸಾಯನಿಕ ರಾಕೆಟ್ ಇಂಜಿನ್ನಿಂದ ನಿರ್ವಹಿಸಲಾಗುತ್ತದೆ. ಈ ಮೂಲಕ ಬಾಹ್ಯಾಕಾಶ ನೌಕೆ ವೇಗವನ್ನು ಹೆಚ್ಚಿಸಲಾಗುತ್ತದೆ. ಹೆಚ್ಚಿದ ವೇಗ ಅದರ ಕಕ್ಷೆಯನ್ನ ಕಡಿಮೆ ವೃತ್ತಾಕಾರದ ಭೂ ಕಕ್ಷೆಯಿಂದ, ಹೆಚ್ಚು ಹತ್ತಿರದ ಕಕ್ಷೆಗೆ ಬದಲಾಯಿಸಲು ಸಹಾಯ ಮಾಡುತ್ತದೆ. ಆ. 17ರಂದು ಪ್ಯೊಪಲ್ಷನ್ ಮಾಡ್ಯೂಲ್ & ಲ್ಯಾಂಡರ್ ಮಾಡ್ಯೂಲ್ ಬೇರ್ಪಡಿಸುವ ಪ್ರಕ್ರಿಯೆ ನಡೆಯಲಿದೆ. ಆ. 23ರ ಸಂಜೆ 5.47ಕ್ಕೆ ಸುರಕ್ಷಿತವಾಗಿ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ.