ಹೆಬ್ರಿ: ಮೊಬೈಲ್ ಹಾಗೂ ಟಿವಿ ನೋಡುತ್ತಾ ರಜಾ ಸಮಯದಲ್ಲಿ ಕಾಲಹರಣ ಮಾಡುವ ಬದಲು, ಬದುಕು ಶಿಕ್ಷಣ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಇಂತಹ ವೈವಿಧ್ಯಮಯ ಬೇಸಗೆ ಶಿಬಿರದಲ್ಲಿ ಮಕ್ಕಳನ್ನು ಸೇರಿಸಿ ಎಂದು ಹೆಬ್ರಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಬಿ.ಕರುಣಾಕರ ಶೆಟ್ಟಿ ಹೇಳಿದರು.
ಅವರು ಚಾಣಕ್ಯ ಎಜುಕೇಷನ್ ಮತ್ತು ಕಲ್ಚರಲ್ ಅಕಾಡೆಮಿ ಆಶ್ರಯದಲ್ಲಿ ಏ.26ರ ವರೆಗೆ ಹೆಬ್ರಿ ಎಸ್.ಆರ್.ಸ್ಕೂಲ್ ಬಳಿ ಇರುವ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ
ನಡೆಯುತ್ತಿರುವ ಚಾಣಕ್ಯ ನಲಿಕಲಿ ವೈವಿಧ್ಯಮಯ ಬೇಸಗೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಎಸ್ .ಆರ್ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ್ ಶೆಟ್ಟಿ ಮಾತನಾಡಿ ಚಾಣಕ್ಯ ಸಂಸ್ಥೆ ಕಳೆದ 8 ವಷ೯ಗಳಿಂದ ನಡೆಸಿಕೊಂಡು ಬರುತ್ತಿರುವ ಬೇಸಗೆ ಶಿಬಿರದಿಂದ ಗ್ರಾಮೀಣ ಪ್ರದೇಶ ಮಕ್ಕಳಿಗೆ ಅನುಕೂಲವಾಗುತ್ತಿದೆ ಎಂದರು.
ಗ್ರಾಮೀಣ ಸೊಗಡು ಹಾಗೂ ಕಸಬನ್ನು ಮಕ್ಕಳಿಗೆ ಪರಿಚಯಿಸುವುದರ ಜತೆಗೆ ವೈವಿಧ್ಯಮಯ ಮನರಂಜನೆ ನೀಡಿ ಮಕ್ಕಳನ್ನುಸಂತೋಷ ಪಡಿಸುವ ಚಾಣಕ್ಯ ಬೇಸಗೆ ಶಿಬಿರದ ಪ್ರಯೋಜನ ಎಲ್ಲರೂ ಪಡೆದುಕೊಳ್ಳಿ ಎಂದು ಸೀತಾನದಿ ಸೌಖ್ಯಯೋಗ ಟ್ರಸ್ಟ್ ಅಧ್ಯಕ್ಷ ಸೀತಾನದಿ ವಿಠ್ಠಲ ಶೆಟ್ಟಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಚಾಣಕ್ಯ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ವಹಿಸಿದ್ದರು.
ಕ್ಯಾಂಪ್ಕೋ ಹೆಬ್ರಿ ಶಾಖಾಧಿಕಾರಿ ರಮೇಶ್ ಡಿ.ಚಾಂತಾರು, ಸಂಗೀತ ಗುರು ಸ್ಮಿತಾ ಭಟ್ ಉಡುಪಿ, ಹೆಬ್ರಾಯ್ ಅಧ್ಯಕ್ಷ ದಿನಕರ್ ಪ್ರಭು, ನಾಟಕ ಕಲಾವಿದ ನಾಗೇಶ ಕಾಮತ್ ಕಟಪಾಡಿ, ಸುಬ್ರಹ್ಮಣ್ಯ ಕಂಗಿನಾಯ, ಸೋನಿ ಪಿ.ಶೆಟ್ಟಿ , ನಿತ್ಯಾನಂದ ಭಟ್ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಉದಯಕುಮಾರ್ ಸ್ವಾಗತಿಸಿ, ನಿತ್ಯಾನಂದ ಶೆಟ್ಟಿ ಕಾಯ೯ಕ್ರಮ ನಿರೂಪಿಸಿ, ಬಲ್ಲಾಡಿ ಚಂದ್ರಶೇಖರ್ ಭಟ್ ವಂದಿಸಿದರು.