ಪೆರ್ಡೂರು ಎ.ಪಿ. ಟಿ. ಶಾಲೆಯಲ್ಲಿ ಚಾಣಕ್ಯ ನಲಿ ಕಲಿ ಬೇಸಗೆ ಶಿಬಿರ ಸಂಪನ್ನ

ಪೆರ್ಡೂರು: ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಸೂಕ್ತ ವೇದಿಕೆಯನ್ನು ಕಲ್ಪಿಸಿಕೊಟ್ಟಾಗ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ವೈವಿದ್ಯ ಶಿಬಿರಗಳಿಗೆ ಸೇರಿಸುವ ಮೂಲಕ ಅವಕಾಶ ಕಲ್ಪಿಸಬೇಕು ಎಂದು ಶಾಲಾ ಮುಖ್ಯ ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಅವರು ತಿಳಿಸಿದರು.

ಅವರು ಚಾಣಕ್ಯ ಶಿಕ್ಷಣ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ಪೆರ್ಡೂರು ಅನಂತಪದ್ಮನಾಭ ದೇವಸ್ಥಾನ ಅನುದಾನಿತ ಪ್ರಾಥಮಿಕ ಶಾಲೆ, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದ ಇವರ ಸಹಯೋಗದೊಂದಿಗೆ ಪೆರ್ಡೂರು ಎ.ಪಿ. ಟಿ.ಶಾಲೆಯಲ್ಲಿ ನಡೆದ ಬೇಸಗೆ ಶಿಬಿರದ ಸಮಾರೋಪದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಪೆರ್ಡೂರು ಅನಂತಪದ್ಮನಾಭ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯ ಸಂತೆಕಟ್ಟೆ ರಾಮದಾಸ್ ನೈಕ್ ಮಾತನಾಡಿ ಮನೆಯಲ್ಲಿ ಒಂದು ಮಗುವನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಿರುವ ಈ ಸಂದರ್ಭದಲ್ಲಿ ಬೆಳಗ್ಗೆಯಿಂದ ಸಂಜೆ ತನಕ ಸಂಸ್ಕಾರ ಭರಿತ ತರಬೇತಿ ನೀಡಿ ನೋಡಿಕೊಳ್ಳುವುದು ಸಾಹಸದ ಕೆಲಸವಾಗಿದ್ದು ಚಾಣಕ್ಯ ಸಂಸ್ಥೆಯ ಪರಿಶ್ರಮ ಶ್ಲಾಘನೀಯ ಎಂದರು.

ಪೋಷಕರಾದ ಪ್ರತಿಮಾ ಮಾತನಾಡಿ ಚಾಣಕ್ಯ ಸಂಸ್ಥೆ ಎಲ್ಲಾ ಕಲಾ ಪ್ರಕಾರಗಳನ್ನು ಒಂದೇ ಸೂರಿನಡಿ ಕಲಿಸುತ್ತಾ ಪ್ರತಿ ವರ್ಷ ವೈವಿಧ್ಯಮಯ ಬೇಸಿಗೆ ಶಿಬಿರವನ್ನು ನಡೆಸುತ್ತಿರುವ ಸಂಸ್ಥೆಗೆ ನಾವೆಲ್ಲರೂ ಪ್ರೋತ್ಸಾಹಿಸಬೇಕು. ಮಕ್ಕಳ ಬಗ್ಗೆ ವಿಶೇಷ ಕಾಳಜಿ ಇರುವ ತಮ್ಮ ಮನೆಯ ಮಕ್ಕಳಂತೆ ನೋಡಿಕೊಳ್ಳುವ ಇಂತಹ ಸಂಸ್ಥೆಗೆ ತಮ್ಮ ಮಕ್ಕಳನ್ನು ಸೇರಿಸಿದಾಗ ಅವರಿಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಾಧ್ಯ ಎಂದರು.

ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಎಸ್‌ಡಿ ಎಂಸಿ ಅಧ್ಯಕ್ಷ ನರಸಿಂಹ ದೇವಾಡಿಗ ವಹಿಸಿ ಮಾತನಾಡಿ ಎಪಿಟಿ ಶಾಲೆಯಲ್ಲಿ ಶಿಬಿರವನ್ನು ಆಯೋಜಿಸಿ ಮಕ್ಕಳಿಗೆ ಉತ್ತಮ ತರಬೇತಿಯನ್ನು ನೀಡಿದ ಚಾಣಕ್ಯ ಸಂಸ್ಥೆಗೆ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದರು.

ಸಮಾರಂಭದಲ್ಲಿ ಪೋಷಕರಾದ ಸತೀಶ್ ಶೆಟ್ಟಿ, ಶಿಬಿರಾರ್ಥಿಗಳಾದ ಮಾನ್ಯ, ಜೋಶ್ನಾ, ಶ್ರೀಯಾ, ಅನಿಕಾ, ಆಂಚಲ್ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು. ಎಪಿಟಿ ಶಾಲೆಯ ಶಿಕ್ಷಕಿ ನಮಿತಾ, ಜಯ, ಚಾಣಕ್ಯ ನಲಿಕಲಿ ಬೇಸಿಗೆ ಶಿಬಿರದ ಸಂಯೋಜಕಿ ಭವ್ಯ, ರೀನಾ,ಮಾನ್ಯ, ಧನ್ಯ, ಮಾನ್ವಿ ಮೊದಲಾದವರು ಉಪಸ್ಥಿರಿದ್ದರು.

ಚಾಣಕ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಉದಯ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ಚಾಣಕ್ಯದ ಪ್ರಾಂಶುಪಾಲೆ ವೀಣಾ ಶೆಟ್ಟಿ ವಂದಿಸಿದರು. ಶಿಬಿರದ ಯಶಸ್ವಿಗೆ ಶಾಲಾ ಎಸ್‌ಡಿಎಂಸಿ, ಶಾಲಾ ಶಿಕ್ಷಕ ವೃಂದ ಹಾಗೂ ಶಿಬಿರಾರ್ಥಿಗಳ ಪೋಷಕರು ಸಹಕರಿಸಿದರು.

ನಾಟಕ ಕಲಾವಿದ ನಾಗೇಶ್ ಕಾಮತ್ ಕಟಪಾಡಿ ಅವರಿಂದ ಪೋಷಕರೊಂದಿಗೆ ಒಂದು ದಿನ ಕಾರ್ಯಕ್ರಮ, ಜಾದುಗಾರ ಪ್ರಥಮ ಕಾಮತ್ ಅವರಿಂದ ಜಾದು ಪ್ರದರ್ಶನ, ಶಿಬಿರಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.