ದಸರಾಕ್ಕೂ ಮುಂಚೆ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದ ನ್ಯಾಯಮೂರ್ತಿ ಸುಭಾಷ್ ಬಿ ಅಡಿ

ಮೈಸೂರು: ಆಂಧ್ರಪ್ರದೇಶಕ್ಕೆ ತಿರುಪತಿ ಹೇಗೆ ಪ್ರಮುಖ, ಅದೇ ರೀತಿ ಕರ್ನಾಟಕಕ್ಕೆ ಚಾಮುಂಡಿಬೆಟ್ಟ ಅಷ್ಟೇ ಪ್ರಮುಖ. ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಎಂಟ್ರಿಯಾಗುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡೊಯ್ಯದಂತೆ ಪರಿಶೀಲಿಸಬೇಕು. ಪ್ರತಿಯೊಂದು ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್​ಗಳ ಬಳಕೆ ನಿಷೇಧಿಸಿ, 20 ಲೀಟರ್​ ಕ್ಯಾನ್​ ನೀರನ್ನು ಪೇಪರ್ ಕಪ್​ನಲ್ಲಿ ಬಳಸಬೇಕು ಎಂದು ಸೂಚಿಸಿದರು.
ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ದಸರಾ ಪ್ರಾರಂಭಕ್ಕೂ ಮುಂಚೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ಮುಖ್ಯಸ್ಥರು ಹಾಗೂ ನ್ಯಾಯಮೂರ್ತಿಗಳಾದ ಸುಭಾಷ್ ಬಿ ಅಡಿ ಅವರು ತಿಳಿಸಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಸ ವಿಲೇವಾರಿ ಕುರಿತು ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚಾಮುಂಡಿಬೆಟ್ಟದಲ್ಲಿ ಪ್ಲಾಸ್ಟಿಕ್ ಮುಕ್ತಗೊಳಿಸಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣದ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ಸೂಚನೆ ನೀಡಿದ್ದಾರೆ.

ಚಾಮುಂಡಿಬೆಟ್ಟವನ್ನು ಪ್ಲಾಸ್ಟಿಕ್ ಮುಕ್ತ ಬೆಟ್ಟ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದಿದ್ದರೆ ಲೈಸೆನ್ಸ್ ರದ್ದುಪಡಿಸಿ. ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ ಪರಿಶೀಲಿಸಬೇಕು. ಹೊಟೇಲ್​ಗಳಲ್ಲಿ ಮತ್ತು ಬೀದಿ ಬದಿ ವ್ಯಾಪಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಕಾನೂನು ಪಾಲಿಸದಿದ್ದರೆ ದಂಡ ಹಾಕಿ. ಮೈಸೂರನ್ನು ಸ್ವಚ್ಛ ನಗರಿಯಾಗಿ ಇಟ್ಟುಕೊಳ್ಳಬೇಕು. ಏಕ ಬಳಕೆಯ ಪ್ಲಾಸ್ಟಿಕ್​ನ್ನು ನಿಷೇಧಿಸಿದ ಮೊದಲ ನಗರ ಮೈಸೂರು. ಎಲ್ಲ ಶಾಲಾ ಕಾಲೇಜುಗಳಲ್ಲಿ ಎಲ್ಲ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದರು.

ಎಲ್ಲ ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳು ಕಸ ವಿಲೇವಾರಿ ಸರಿಯಾಗಿ ನಿರ್ವಹಣೆ ಮಾಡಬೇಕು. ಹಸಿ ಕಸವನ್ನು ಘನ ತಾಜ್ಯ ವಿಲೇವಾರಿ ಘಟಕಗಳಲ್ಲಿ ಗೊಬ್ಬರವಾಗಿ ತಯಾರಿಸಿ ಮರು ಬಳಕೆ ಮಾಡಬೇಕು. ರಸ್ತೆಗಳನ್ನು ಯಾವುದಾದರೂ ಉದ್ದೇಶಕ್ಕೆ ಅನುಮತಿ ಪಡೆದು ಆಗೆದರೆ, ಅವರೇ ರಸ್ತೆಯನ್ನು ದುರಸ್ಥಿ ಮಾಡಬೇಕು. ಮದುವೆ ಹಾಗೂ ಇತರ ಮೆರವಣೆಗೆ ಅಥವಾ 100ಕ್ಕಿಂತ ಹೆಚ್ಚು ಜನ ಸೇರುವ ಸಭೆ, ಸಮಾರಂಭಗಳಲ್ಲಿ ಆಗುವ ಕಸ ನಿರ್ವಹಣೆಗೆ ಶುಲ್ಕ ವಿಧಿಸಬೇಕು. ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕಸವನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಕೆಮಿಕಲ್ ಹಾಗೂ ಬಾಯೋ ಮೆಡಿಕಲ್ ವೆಸ್ಟ್​ನ್ನು ಸರಿಯಾಗಿ ಏಜೆನ್ಸಿಗಳು ಸಂಗ್ರಹಿಸಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.

ಇನ್ನು ಸಭೆಯಲ್ಲಿ ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ರಾಧ ಲಕ್ಷ್ಮೀಕಾಂತ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಾಯತ್ರಿ, ನಗರ ಪೊಲೀಸ್ ಆಯುಕ್ತರಾದ ರಮೇಶ್ ಬಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಾಟ್ಕರ್ ಮತ್ತಿತರರು ಉಸ್ಥಿತರಿದ್ದರು.

ನಂತರ ಜಿಲ್ಲಾಧಿಕಾರಿ ಡಾ. ಕೆ.ವಿ ರಾಜೇಂದ್ರ ಮಾತನಾಡಿ, ಏಕ ಬಳಕೆಯ ಪ್ಲಾಸ್ಟಿಕ್​ಅನ್ನು ನಿಷೇಧಿಸಿದ್ದು, ಬಳಕೆದಾರರಿಗೆ ದಂಡ ವಿಧಿಸಲಾಗುತ್ತಿದೆ. ಆಷಾಢ ಮಾಸದಲ್ಲಿ ಚಾಮುಂಡಿ ಬೆಟ್ಟಕ್ಕೆ ಹೆಚ್ಚಿನ ಭಕ್ತಾದಿಗಳು ಭೇಟಿ ನೀಡುತ್ತಿದ್ದು, ಪ್ಲಾಸ್ಟಿಕ್ ಮುಕ್ತ ಪ್ರದೇಶ ಎಂದು ಘೋಷಿಸಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಲಲಿತ ಮಹಲ್ ಪ್ಯಾಲೇಸ್ ಬಳಿಯಿಂದ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ವಿಶೇಷ 5 ತಂಡಗಳನ್ನು ರಚಿಸಿ ಚಾಮುಂಡಿ ಬೆಟ್ಟಕ್ಕೆ ಏಕ ಬಳಕೆಯ ಪ್ಲಾಸ್ಟಿಕ್ ತೆಗೆದುಕೊಂಡು ಹೋಗದಂತೆ ತಡೆಯಲಾಗಿದೆ. ಸಭೆ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಾಟಲ್ ನೀರನ್ನು ಬಳಸದೆ ಪೇಪರ್ ಅಥವಾ ಗಾಜಿನ ಲೋಟದಲ್ಲಿ ನೀರನ್ನು ನೀಡಲಾಗುತ್ತಿದೆ ಎಂದರು.