ನ.27 ರಿಂದ 30 ರವರೆಗೆ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಮಹೋತ್ಸವ

ಕಡಬ: ದೇಶ-ವಿದೇಶಗಳಲ್ಲಿ ಪ್ರಸಿದ್ದಿ ಪಡೆದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ 30 ರವರೆಗೆ ಸಂಭ್ರಮದ ಚಂಪಾಷಷ್ಠಿ ಮಹೋತ್ಸವ-2022 ಜರುಗಲಿದೆ.

ಉತ್ಸವದ ವಿವರಗಳು:

ನ.27 ಆದಿತ್ಯವಾರದಂದು ರಾತ್ರಿ ಹೂವಿನ ತೇರಿನ ಉತ್ಸವ, ನ.28 ಸೋಮವಾರದಂದು ರಾತ್ರಿ ಪಂಚಮಿ ರಥೋತ್ಸವ ಮತ್ತು ತೈಲ್ಯಾಭ್ಯಂಜನ, ನ.29 ಮಂಗಳವಾರದಂದು ಚಂಪಾಷಷ್ಠಿ ಮಹಾರಥೋತ್ಸವ, ನ.30 ಬುಧವಾರದಂದು ಅವಭೃತೋತ್ಸವ ಮತ್ತು ನೌಕಾವಿಹಾರ ನಡೆಯಲಿದೆ.

ನ. 27 ಮತ್ತು 28 ರಂದು ರಾತ್ರಿ ಹೊತ್ತಿನ ಪ್ರಾರ್ಥನೆ ಸೇವೆ ಹಾಗೂ ನ.29 ರಂದು ಮಧ್ಯಾಹ್ನ ಪ್ರಾರ್ಥನೆ ಸೇವೆ, ಆಶ್ಲೇಷ ಬಲಿ ಮತ್ತು ನಾಗಪ್ರತಿಷ್ಠೆ ಸೇವೆ ಇರುವುದಿಲ್ಲ. ನ.23, 28, 29 ಮತ್ತು ಡಿ.5 ರಂದು ಪಂಚಾಮೃತ ಮಹಾಭಿಷೇಕ ಸೇವೆ ನೆರವೇರುವುದಿಲ್ಲ. ನ.21 ರಿಂದ ಡಿ.5 ರವರೆಗೆ ಜಾತ್ರೆಯ ಪ್ರಯುಕ್ತ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. ನ.28 ರಂದು ಕಿರುಷಷ್ಠಿ ಮಹೋತ್ಸವ ಜರುಗಲಿರುವುದು.

ಉತ್ಸವದಲ್ಲಿ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಆಯುಕ್ತೆ ಶ್ರೀಮತಿ ರೋಹಿಣಿ ಸಿಂಧೂರಿ, ದ.ಕ ಜಿಲ್ಲಾಧಿಕಾರಿ ರವಿಕುಮಾರ್ ಎಂ.ಆರ್, ದೇವಳದ ಕಾರ್ಯನಿರ್ವಹಣಾಧಿಕಾರಿ ಡಾ. ನಿಂಗಯ್ಯ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಪುಷ್ಪಲತ, ವ್ಯವಸ್ಥಾಪನಾ ಸಮಿತಿಯ ಸರ್ವ ಸದಸ್ಯರು ಸಿಬ್ಬಂದಿ ವರ್ಗ ಮತ್ತು ಮಾಸ್ಟರ್ ಪ್ಲಾನ್ ಮೇಲ್ವಿಚಾರಣಾ ಸಮಿತಿಯ ಸರ್ವ ಸದಸ್ಯರು ಭಾಗವಹಿಸಲಿದ್ದಾರೆ ಎಂದು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ ರಾಮ ಎಸ್.ಸುಳ್ಳಿ ತಿಳಿಸಿದ್ದಾರೆ.