ಉಡುಪಿ: ಹಿಂದೂ ಸಂಘಟನೆಯ ಪ್ರಖರ ವಾಗ್ಮಿ ಚೈತ್ರಾ ಕುಂದಾಪುರ ಇವರನ್ನು ಸಿಸಿಬಿ ಬೆಂಗಳೂರು ವಿಭಾಗದ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ
ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಪ್ರದೇಶದಲ್ಲಿದ್ದಾಗ ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.
ಬೈಂದೂರಿನ ಬಿಜೆಪಿ ಮುಖಂಡ ಹಾಗೂ ಸಮಾಜ ಸೇವಕರೊಬ್ಬರಿಗೆ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯಿಂದ ಟಿಕೆಟ್ ಕೊಡಿಸುವುದಾಗಿ ನಂಬಿಸಿ ಸಂಗಡಿಗರೊಂದಿಗೆ ಸೇರಿಕೊಂಡು ಸುಮಾರು ಏಳು ಕೋಟಿ ರೂಪಾಯಿ ವಂಚನೆ ಮಾಡಿದ್ದರು ಎಂಬ ಮಾಹಿತಿ ಪತ್ರವೊಂದರ ಮೂಲಕ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಈವರೆಗೆ ಅಧಿಕೃತ ದೂರು ದಾಖಲಾಗಿಲ್ಲ. ಆದರೆ ಈ ಬಗ್ಗೆ ವ್ಯಕ್ತಿಯು ಬೆಂಗಳೂರಿನಲ್ಲಿ ದೂರು ನೀಡಿದ್ದರು ಎಂಬ ಬಗ್ಗೆ ಮಾಹಿತಿ ಇದ್ದು, ಅದರಂತೆ ಬೆಂಗಳೂರಿನಿಂದ ಸಿಸಿಬಿ ಪೊಲೀಸರು ಉಡುಪಿಗೆ ಆಗಮಿಸಿ ಆಕೆಯನ್ನು ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಕುಂದಾಪುರ ಜೊತೆಗೆ ಶ್ರೀಕಾಂತ್ ನಾಯಕ್ ಪೆಲತ್ತೂರು ಎಂಬವರನ್ನು ಕೂಡ ಪೊಲೀಸರು ವಶಕ್ಕೆ ಪಡೆದಿದ್ದು, ಇಬ್ಬರು ಆರೋಪಿಗಳನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಹುಕೋಟಿ ವಂಚನೆ ಪ್ರಕರಣದಲ್ಲಿ ಇದುವರೆಗೆ ಗಗನ್ ಕಡೂರು, ಪ್ರಸಾದ್ ಎಂಬವರನ್ನು ಈಗಾಗಲೇ ವಶಕ್ಕೆ ಪಡೆದಿದ್ದು, ಮಂಗಳವಾರ ಚೈತ್ರಾ ಕುಂದಾಪುರ ಮತ್ತು ಶ್ರೀಕಾಂತ್ ನಾಯಕನನ್ನು ವಶಕ್ಕೆ ಪಡೆದಿದ್ದಾರೆ.
ಬಿಜೆಪಿ ನಾಯಕರ ಹೆಸರಲ್ಲಿ ಹಲವರಿಗೆ ಪಂಗನಾಮ ಹಾಕಿರುವ ಆರೋಪ ಈ ತಂಡದ ಮೇಲಿದೆ.