ಬೆಂಗಳೂರು: ಪ್ರಸಕ್ತ ಸಾಲಿನ ಸಿಇಟಿ ಪರೀಕ್ಷೆಗೆ ದಿನಾಂಕ ಪ್ರಕಟ ಮಾಡಲಾಗಿದ್ದು, ಈ ಬಗ್ಗೆ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಮಾಧ್ಯಮಗಳಿಗೆ ತಿಳಿಸಿ, ವೇಳಾಪಟ್ಟಿ ಪ್ರಕಟಿಸಿದ್ದಾರೆ.
ಬರುವ ಜೂನ್ 16, 17, 18ರಂದು ಸಿಇಟಿ ಪರೀಕ್ಷೆ ನಡೆಯಲಿದ್ದು, ಏಪ್ರಿಲ್ 5 ರಿಂದ ಆನ್ ಲೈನ್ ಮೂಲಕ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಏಪ್ರಿಲ್ 20 ರವರೆಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಏಪ್ರಿಲ್ 22 ವರೆಗೆ ಶುಲ್ಕ ಪಾವತಿಗೆ ಕೊನೆ ದಿನ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.
ಜೂನ್ 16 ರಂದು ಜೀವಶಾಸ್ತ್ರ ಹಾಗೂ ಗಣಿತ, ಜೂನ್ 17 ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಪರೀಕ್ಷೆ, ಜೂನ್ 18 ರಂದು ಗಡಿನಾಡು ಮತ್ತು ಹೊರನಾಡು ಕನ್ನಡಿಗರಿಗೆ ಕನ್ನಡ ಪರೀಕ್ಷೆ ನಡೆಯಲಿದೆ.
ಮೇ 2ರಿಂದ 6ರವರೆಗೂ ವಿದ್ಯಾರ್ಥಿಗಳು ಅರ್ಜಿಯಲ್ಲಿನ ಲೋಪ ಸರಿಪಡಿಸಲು ಅವಕಾಶ ನೀಡಲಾಗಿದ್ದು, ಮೇ 30ರಿಂದ ಪರೀಕ್ಷೆ ಪ್ರವೇಶ ಪತ್ರ ಡೌನ್‍ಲೋಡ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದ್ದಾರೆ.