ಸಿಇಟಿ ಪ್ರವೇಶ ಪರೀಕ್ಷೆ: ಅರ್ಜಿ ಸಲ್ಲಿಸಲು ಜುಲೈ 10 ಕೊನೆಯ ದಿನ

ಬೆಂಗಳೂರು: ಪ್ರಸಕ್ತ ಸಾಲಿನ (2021–22) ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯಲಿರುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಇಟಿ–2021) ಅರ್ಜಿ ಸಲ್ಲಿಸುವ ಪ್ರಕ್ರಿಯೆ ಇಂದಿನಿಂದ (ಜೂನ್ 15) ಆರಂಭಗೊಂಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ.

ಜೂನ್‌ 15ರಿಂದ ಜುಲೈ 10ರ ಸಂಜೆ 5.30ರವರೆಗೆ ಸಿಇಟಿಗೆ ನೋಂದಣಿ ಮತ್ತು ಅರ್ಜಿ ಸಲ್ಲಿಸಬಹುದು. ಶುಲ್ಕ ಪಾವತಿಸಲು ಜುಲೈ 13 ಕೊನೆಯ ದಿನ. ವಿಶೇಷ ಪ್ರವರ್ಗಗಳ ಪ್ರಮಾಣಪತ್ರವನ್ನು ಜುಲೈ 14ರಿಂದ 20ರ ಒಳಗೆ ಸಲ್ಲಿಸಬೇಕು. ಸಲ್ಲಿಸಿದ ಅರ್ಜಿಗಳಲ್ಲಿ ತಿದ್ದುಪಡಿಗೆ (ಶುಲ್ಕ ಪಾವತಿಸುವವರು ಮಾತ್ರ) ಜುಲೈ 19ರಿಂದ 22ರವರೆಗೆ ಅವಕಾಶವಿದೆ. ಆಗಸ್ಟ್‌ 13ರಂದು ಪ್ರವೇಶಪತ್ರ ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ಎಂಜಿನಿಯರಿಂಗ್‌, ತಂತ್ರಜ್ಞಾನ, ಯೋಗ, ನ್ಯಾಚುರೋಪಥಿ, ಬಿ. ಫಾರ್ಮ, ಎರಡನೇ ವರ್ಷದ ಬಿ. ಫಾರ್ಮ ಮತ್ತು ಫಾರ್ಮ–ಡಿ, ಕೃಷಿ ವಿಜ್ಞಾನ ಕೋರ್ಸ್‌, ವೆಟನರಿ ಕೋರ್ಸ್‌ ಪ್ರವೇಶಕ್ಕೆ ಆಗಸ್ಟ್‌ 28 ಮತ್ತು 29ರಂದು ಸಿಇಟಿ ನಡೆಯಲಿದೆ. ಶೈಕ್ಷಣಿಕ ಅರ್ಹತೆ ಮತ್ತು ಇತರ ವಿವರಗಳಿಗೆ ‘ಯುಜಿಸಿಇಟಿ–2021 ಮಾಹಿತಿ ಪುಸ್ತಕ’ವನ್ನು ಕೆಇಎ ವೆಬ್‌ಸೈಟ್‌ನಿಂದ (http://kea.kar.nic.in) ಡೌನ್‌ಲೋಡ್‌ ಮಾಡಿಕೊಳ್ಳಬಹುದು.

ವೈದ್ಯಕೀಯ, ದಂತ ವೈದ್ಯಕೀಯ, ಆರ್ಯುವೇದ, ಯುನಾನಿ, ಹೋಮಿಯೋಪಥಿ ಸೀಟುಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ನೀಟ್‌) –2021ರಲ್ಲಿ ಅರ್ಹತೆ ಪಡೆಯಬೇಕು. ಆರ್ಕಿಟೆಕ್ಚರ್‌ ಪ್ರವೇಶಕ್ಕೆ ಕೌನ್ಸಿಲ್‌ ಆಫ್‌ ಆರ್ಕಿಟೆಕ್ಚರ್‌ನವರು ನಡೆಸುವ ಎನ್‌ಎಟಿಎ–2021 ಅಥವಾ 2021ರ ಜೆಇಇ–2 ಪರೀಕ್ಷೆಯಲ್ಲಿ ಕಡ್ಡಾಯವಾಗಿ ಅರ್ಹತೆ ಪಡೆಯಬೇಕು. ಜೊತೆಗೆ, ಸಿಇಟಿ–2021 ಗೆ ಆನ್‌ಲೈನ್‌ ಮೂಲಕ ನೋಂದಾಯಿಸಿಕೊಂಡು, ಅರ್ಜಿ ಸಲ್ಲಿಸುವುದೂ ಕಡ್ಡಾಯ. ಹೆಚ್ಚಿನ ಮಾಹಿತಿ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.