ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟಲು ಭಾರತದ ಮೊದಲ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಎಚ್‌ಪಿವಿ) ಲಸಿಕೆಯನ್ನು ಕೆಲವೇ ತಿಂಗಳುಗಳಲ್ಲಿ ಬಿಡುಗಡೆ ಮಾಡಲಾಗುವುದು ಮತ್ತಿದು 200-400 ರೂಪಾಯಿಗಳ ಕೈಗೆಟುಕುವ ಬೆಲೆಯಲ್ಲಿ ಜನರಿಗೆ ಲಭ್ಯವಾಗಲಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಸಿಇಒ ಅಡರ್ ಪೂನವಾಲಾ ಗುರುವಾರ ತಿಳಿಸಿದ್ದಾರೆ.
ಲಸಿಕೆಯನ್ನು ವೈಜ್ಞಾನಿಕವಾಗಿ ಪೂರ್ಣಗೊಳಿಸಿರುವುದನ್ನು ಘೋಷಿಸಲು ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಲಸಿಕೆ ಕೈಗೆಟುಕುವ ಬೆಲೆಯಲ್ಲಿರುತ್ತದೆ ಮತ್ತು ಇದು ಸಾಮಾನ್ಯ ಜನರಿಗೆ ತಲುಪುವುದನ್ನು ಸರ್ಕಾರವು ಖಚಿತಪಡಿಸುತ್ತದೆ ಎಂದಿದ್ದಾರೆ.
ಲಸಿಕೆಗೆ ಸಂಬಂಧಿಸಿದ ಆರ್ ಎಂಡ್ ಡಿ ಚಟುವಟಿಕೆಗಳು ಪೂರ್ಣಗೊಂಡಿವೆ ಮತ್ತು ಈಗ ಅವುಗಳನ್ನು ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡುವ ಮುಂದಿನ ಹಂತವು ನಡೆಯಲಿದೆ ಎನ್ನುವುದನ್ನು ವೈಜ್ಞಾನಿಕ ಪೂರ್ಣಗೊಳಿಸುವಿಕೆ ಸೂಚಿಸುತ್ತದೆ.
ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೂನಾವಾಲಾ, “ಗರ್ಭಕಂಠದ ಕ್ಯಾನ್ಸರ್ ಲಸಿಕೆಯು ಕೈಗೆಟುಕುವ ದರದಲ್ಲಿ ಲಭ್ಯವಿರುತ್ತದೆ ಮತ್ತು 200-400 ರೂಗಳಲ್ಲಿ ಲಭ್ಯವಿರುತ್ತದೆ. ಆದರೆ, ಅಂತಿಮ ಬೆಲೆಯನ್ನು ಸರ್ಕಾರದೊಂದಿಗೆ ವಿವರವಾದ ಚರ್ಚೆಯ ನಂತರ ನಿರ್ಧರಿಸಲಾಗುತ್ತದೆ. ಗರ್ಭಕಂಠದ ಕ್ಯಾನ್ಸರ್‌ಗೆ ಲಭ್ಯವಿರುವ ಇತರ ಲಸಿಕೆಗಳಿಗೆ ಹೋಲಿಸಿದರೆ ಈ ಲಸಿಕೆಯ ಬೆಲೆ ತುಂಬಾ ಕಡಿಮೆ ಇರುತ್ತದೆ. ವರ್ಷಾಂತ್ಯದ ವೇಳೆಗೆ ಲಸಿಕೆಯನ್ನು ಪ್ರಾರಂಭಿಸಲಾಗುವುದು” ಎಂದಿದ್ದಾರೆ.
“ಮೊದಲು ಲಸಿಕೆಯನ್ನು ಸರ್ಕಾರಿ ಇಲಾಖೆಗಳ ಮೂಲಕ ಲಭ್ಯವಾಗುವಂತೆ ಮಾಡಲಾಗುವುದು ಮತ್ತು ಮುಂದಿನ ವರ್ಷದಿಂದ ಕೆಲವು ಖಾಸಗಿ ಪಾಲುದಾರರು ಸಹ ಇದರಲ್ಲಿ ಭಾಗಿಯಾಗಲಿದ್ದಾರೆ. 200 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಯೋಜನೆ ಜಾರಿಯಲ್ಲಿದೆ ಮತ್ತು ಮೊದಲು ಲಸಿಕೆಯನ್ನು ಭಾರತದಲ್ಲಿ ನೀಡಲಾಗುವುದು ಮತ್ತು ದೇಶದ ಅಗತ್ಯಗಳನ್ನು ಪೂರೈಸಿದ ನಂತರವೇ ಅದನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುವುದು” ಎಂದು ಪೂನಾವಾಲಾ ಹೇಳಿದ್ದಾರೆ.
ಈ ಲಸಿಕೆಗಾಗಿ ದೇಶಾದ್ಯಂತ 2000 ಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದಾರೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ತಿಳಿಸಿದ್ದಾರೆ.
ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15 ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.