ಉಡುಪಿ: ಇಲ್ಲಿನ ತೆಂಕಪೇಟೆಯಲ್ಲಿರುವ ಸಂಸ್ಕೃತ ಭಾರತಿ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಇದೇ ತಿಂಗಳ ನಾಲ್ಕನೇ ತಾರೀಕಿನಂದು ಆರಂಭಗೊಂಡಿದ್ದ ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರ ಮಂಗಳವಾರ ಸಮಾರೋಪಗೊಂಡಿತು.
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಕೃತ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ಶ್ರೀಧರ ಆಚಾರ್ಯ, ಒಂದು ಕಾಲದಲ್ಲಿ ಜನಸಾಮಾನ್ಯರ ಆಡುಭಾಷೆಯಾಗಿದ್ದ ಸಂಸ್ಕೃತವನ್ನು ನಾವು ನಮ್ಮ ಉದಾಸೀನತೆಯಿಂದಾಗಿ ಕಳೆದುಕೊಳ್ಳುತ್ತ ಬಂದೆವು. ಆದರೆ, ಸಂಸ್ಕೃತವನ್ನು ಪುನಃ ಜನಸಾಮಾನ್ಯರ ಆಡುಭಾಷೆ ಆಗುವಂತಾಗಬೇಕೆಂಬ ನಿಟ್ಟಿನಲ್ಲಿ ಸಂಸ್ಕೃತ ಭಾರತಿಯು ಸಂಘಟಿತ ಪ್ರಯತ್ನ ನಡೆಸುತ್ತಿದ್ದು, ದೇಶ-ವಿದೇಶಗಳಲ್ಲಿ ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಆಯೋಜಿಸುತ್ತಿದೆ ಎಂದರು.
ಸಮಾರಂಭದ ಅಭ್ಯಾಗತರಾಗಿದ್ದ ಸಂಸ್ಕೃತ ಭಾರತಿ ಉಡುಪಿ ಜಿಲ್ಲಾ ಕೋಷ ಪ್ರಮುಖರಾದ ಅಶೋಕ್ ಕಿಣಿ ಮಾತನಾಡಿ, ಎಲ್ಲ ವರ್ಗದ ಮಹಾತ್ಮರಿಂದಲೂ ಸಂಸ್ಕೃತ ದಲ್ಲಿ ಕಾವ್ಯ, ಶಾಸ್ತ್ರಗಳು ರಚನೆಗೊಂಡಿದ್ದರೂ ಕೂಡ ಸಂಸ್ಕೃತ ಕೇವಲ ಒಂದು ಸಮುದಾಯದ ಭಾಷೆ ಎಂಬುದಾಗಿ ಬಿಂಬಿಸುವ ಷಡ್ಯಂತ್ರ ದೇಶದಲ್ಲಿ ಹಿಂದಿನಿಂದಲೂ ನಡೆಯುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಂಸ್ಕೃತ ಸಂಭಾಷಣ ಶಿಬಿರಾರ್ಥಿಗಳು ಕಿರು ನಾಟಕ, ಗೀತ ಗಾಯನ ಹಾಗೂ ಅನಿಸಿಕೆಗಳನ್ನು ಸಂಸ್ಕೃತದಲ್ಲಿ ವ್ಯಕ್ತಪಡಿಸಿದರು. ಸಂಸ್ಕೃತ ಭಾರತಿಯ ಉಡುಪಿ ಜಿಲ್ಲಾ ಸಂಯೋಜಕರಾದ ಶ್ರೀಯುತ ನಟೇಶ್, ಶಿಬಿರದ ಶಿಕ್ಷಕಿ ಕುಮಾರಿ ಅಭಿಜ್ಞಾ ಉಪಸ್ಥಿತರಿದ್ದರು.