ಮಧ್ಯವರ್ತಿಗಳ ಹಾವಳಿ ಇಲ್ಲದೆ ದೇಶದ ಕಟ್ಟಕಡೆಯ ವ್ಯಕ್ತಿಗೂ ನೇರವಾಗಿ ಸೌಲಭ್ಯ ಒದಗಿಸುತ್ತಿದೆ ಕೇಂದ್ರ: ಶೋಭಾ ಕರಂದ್ಲಾಜೆ

ಉಡುಪಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ದೇಶದ ಕಟ್ಟಕಡೆಯ ವ್ಯಕ್ತಿಗೂ ಯಾವುದೇ ಮಧ್ಯವರ್ತಿಗಳ ಹಾವಳಿ ಇಲ್ಲದೆ ನೇರವಾಗಿ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆಯ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂಧ್ಲಾಜೆ ಹೇಳಿದರು.

ಅವರು ಮಂಗಳವಾರ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ, ಕೇಂದ್ರ ಸರ್ಕಾರ ಜಾರಿಗೊಳಿಸಿದ ಜನಪ್ರಿಯ ಯೋಜನೆಗಳ ಫಲಾನುಭವಿಗಳೊಂದಿಗೆ ನಡೆದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕರದಿಂದ ದೇಶದ ಜನರ ಬದುಕಿಗೆ ನೆಮ್ಮದಿ-ಸಂತೋಷ ನೀಡುವ, ಜೀವನ ಮಟ್ಟ ಸುಧಾರಿಸುವ ಅನೇಕ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದ್ದು, ಸಾರ್ವಜನಿಕರ ತೆರಿಗೆಯ ಪ್ರಯೋಜನವು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಪಾರದರ್ಶಕವಾಗಿ ತಲುಪಿಸಲಾಗುತ್ತಿದೆ. ಜಾತಿ, ಧರ್ಮ, ಪಕ್ಷವನ್ನು ಮೀರಿದ ಅಭಿವೃದ್ದಿಗೆ ಚಾಲನೆ ನೀಡಲಾಗಿದೆ.

ದೇಶ ರಕ್ಷಣೆ, ರಸಗೊಬ್ಬರ ಮತ್ತು ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಗುರಿ ಹೊಂದಿದ್ದು, ಅದಕ್ಕಾಗಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ರಕ್ಷಣಾ ಉಪಕರಣ ಮತ್ತು ರಸಗೊಬ್ಬರದ ದೇಶೀಯ ಉತ್ಪಾದನೆ ಪ್ರಗತಿಯಲ್ಲಿದೆ. ಖಾದ್ಯ ತೈಲ ಬೆಳೆಯಲು ಶೇ.90 ರಷ್ಟು ಸಬ್ಸಿಡಿ ನೀಡಲಾಗುತ್ತಿದೆ. ಆಯುಷ್ಮಾನ್ ಭಾರತ ಯೋಜನೆಯ ಬಗ್ಗೆ ಅನ್ಯ ದೇಶಗಳು ಅಧ್ಯಯನ ಮಾಡುತ್ತಿವೆ.

ಉಡುಪಿ ಜಿಲ್ಲೆಯಲ್ಲಿ ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಅನುಷ್ಠಾನದಲ್ಲಿ ಇನ್ನಷ್ಟು ಪ್ರಗತಿಯಾಗಬೇಕಿದೆ, ಜಿಲ್ಲೆಯಲ್ಲಿ ಜಿಲ್ಲಾ ಕೃಷಿ ಯೋಜನೆಯನ್ನು ರಚಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದಲ್ಲಿ ಅದಕ್ಕೆ ಅನುಮೋದನೆ ದೊರಕಿಸಲಾಗುವುದು. ಈ ಯೋಜನೆಯಿಂದ ಜಿಲ್ಲೆಯಲ್ಲಿ ಕೃಷಿ ಉತ್ಪನ್ನಗಳ ದಾಸ್ತಾನು ಮಾಡಲು ಉಗ್ರಾಣ, ಶೀತಲೀಕರಣಗಳ ಘಟಕ, ಆಹಾರ ಗುಣಮಟ್ಟ ಪರೀಕ್ಷಿಸುವ ಲ್ಯಾಬ್ ಗಳ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡಲಿದ್ದು, ಇದರಿಂದ ಜಿಲ್ಲೆಯ ರೈತರ ಬೆಳೆಗಳಿಗೆ ಸೂಕ್ತ ಬೆಲೆ ದೊರೆಯುವುದರ ಜೊತೆಗೆ ಅವರ ಆದಾಯ ದ್ವಿಗುಣಗೊಳ್ಳಲು ಸಾಧ್ಯವಾಗಲಿದೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್ ಮಾತನಾಡಿ, ಕೇಂದ್ರ ಸರ್ಕಾರದ ಹಲವು ಜನಪರ ಯೋಜನೆಗಳು ದೇಶಕ್ಕೆ ಯಾವುದೇ ಆರ್ಥಿಕ ನಷ್ಟ ಉಂಟು ಮಾಡದೇ ಫಲಾನುಭವಿಗಳಿಗೆ ನೇರವಾಗಿ ತಲುಪುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಜಿಲ್ಲಾ ಪಂಚಾಯತ್ ಸಿಇಓ ಪ್ರಸನ್ನ ಉಪಸ್ಥಿತರಿದ್ದರು.

ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಕುಮಾರ್ ಶೆಟ್ಟಿ ನಿರೂಪಿಸಿ ವಂದಿಸಿದರು.

ಕಾರ್ಯಕ್ರಮದಲ್ಲಿ ಪ್ರದಾನ ಮಂತ್ರಿ ಆವಾಸ್ ಯೋಜನೆ, ಪ್ರದಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ, ಪ್ರದಾನ ಮಂತ್ರಿ ಉಜ್ವಲ ಯೋಜನೆ, ಪ್ರದಾನ ಮಂತ್ರಿ ಸ್ವ ನಿಧಿ, ಪ್ರದಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ, ಪ್ರದಾನ ಮಂತ್ರಿ ಮುದ್ರಾ ಯೋಜನೆ, ಆಯುಷ್ಮಾನ್ ಭಾರತ್ , ಪೋಷಣ್ ಅಭಿಯಾನ, ಜಲ ಜೀವನ್ ಮಿಷನ್ ಯೋಜನೆಗಳ ಫಲಾನುಭವಿಗಳು ಸಂಸದರೊಂದಿಗೆ ಸಂವಾದದಲ್ಲಿ ಮಾತನಾಡಿ, ಯೋಜನೆಯಿಂದ ಪಡೆದ ಪ್ರಯೋಜನಗಳ ಬಗ್ಗೆ ವಿವರಿಸಿದರು.