ರಾಜ್ಯಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತು 1,18,280 ಕೋಟಿ ರೂ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕಕ್ಕೆ 4,314 ಕೋಟಿ ಬಿಡುಗಡೆ

ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ರಾಜ್ಯಗಳಿಗೆ ಮೂರನೇ ಕಂತಿನ ತೆರಿಗೆ ಹಂಚಿಕೆಯ ಮೂರನೇ ಕಂತಾಗಿ 1,18,280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಮಾಸಿಕ ಹಂಚಿಕೆ 59,140 ಕೋಟಿ ರೂ. ಗಳಿಗಿಂತ ಇದು ಹೆಚ್ಚಾಗಿದೆ.

ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲ ಲಭ್ಯವಾಗುವಂತೆ ಮಾಡಲು ಜೂನ್ 2023 ರಲ್ಲಿ ನಿಯಮಿತ ಕಂತಿಗೆ ಹೆಚ್ಚುವರಿಯಾಗಿ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಉತ್ತರ ಪ್ರದೇಶಕ್ಕೆ 21,218 ಕೋಟಿ, ಬಿಹಾರ 11,897 ಕೋಟಿ , ಮಧ್ಯಪ್ರದೇಶ 9,285 ಕೋಟಿ, ಪಶ್ಚಿಮ ಬಂಗಾಳ 8,898 ಕೋಟಿ, ಮತ್ತು ಮಹಾರಾಷ್ಟ್ರ 7,472 ಕೋಟಿ ರೂ, ಕರ್ನಾಟಕಕ್ಕೆ 4,314 ಕೋಟಿ ರೂ ಬಿಡುಗಡೆಗೊಂಡಿದೆ.

ಪ್ರಸ್ತುತ, ಕೇಂದ್ರವು ಸಂಗ್ರಹಿಸುವ ತೆರಿಗೆಯ 41 ಪ್ರತಿಶತವನ್ನು ಒಂದು ಆರ್ಥಿಕ ವರ್ಷದಲ್ಲಿ ರಾಜ್ಯಗಳಿಗೆ 14 ಕಂತುಗಳಲ್ಲಿ ವಿತರಿಸುತ್ತದೆ. 2023-24ರ ಬಜೆಟ್ ಪ್ರಕಾರ, ಕೇಂದ್ರವು ಈ ವರ್ಷ ರಾಜ್ಯಗಳಿಗೆ 10.21 ಲಕ್ಷ ಕೋಟಿ ರೂಪಾಯಿಗಳನ್ನು ವರ್ಗಾಯಿಸುವ ನಿರೀಕ್ಷೆಯಿದೆ.